ದೆಹಲಿ: ಚಳಿಗಾಲ ಬಂದರೇ ಸಾಕು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತದೆ.
ಹೌದು, ರಾಷ್ಟ್ರದ ರಾಜಧಾನಿ ದೆಹಲಿ ನಗರದಲ್ಲಿ ದಟ್ಟವಾದ ಮಂಜಿನ ವಾತಾವರಣ ಕವಿದಿದ್ದು ಕರ್ನಾಟಕದ 21 ಶಾಸಕರು ಸುಮಾರು ನಾಲ್ಕು ಗಂಟೆಗಳ ಕಾಲ ವಿಮಾನದಲ್ಲಿಯೇ ಕುಳಿತಿರುವ ಘಟನೆ ನಡೆದಿದೆ.
ಭಾನುವಾರ ಆಯೋಜನೆಗೊಂಡಿದ್ದ ವೋಟ್ ಚೋರಿ ಸಮಾವೇಶಕ್ಕೆ ಮಂತ್ರಿಗಳು, ಕಾಂಗ್ರೆಸ್ ಶಾಸಕರು ದೆಹಲಿಗೆ ಆಗಮಿಸಿದ್ದರು. ಇಂದು ದಾವಣಗೆರೆಯಲ್ಲಿ ನಡೆಯಲಿರುವ ಶಾಮನೂರು ಶಿವಶಂಕರಪ್ಪಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೆಹಲಿಯಿಂದ ಬೆಳಗಾವಿಗೆ ಹೋಗುವ ವಿಮಾನ ಏರಿದ್ದರು.
ಶಾಸಕರ ವಿಮಾನ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು. ವಿಮಾನದ ಒಳಗಡೆ ಕುಳಿತುಕೊಂಡ ಬಳಿಕ ದಟ್ಟವಾದ ಹೊಗೆಯಿಂದಾಗಿ ವಿಮಾನ ಟೇಕಾಫ್ ಆಗಿಲ್ಲ.
ಸುಮಾರು 4 ಗಂಟೆಯಿಂದ ಶಾಸಕರು ವಿಮಾನದಲ್ಲೇ ಕುಳಿತ್ತಿದ್ದು ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕಾಫ್ ಅಗಿಲ್ಲ. ವಿಮಾನ ಎಷ್ಟು ಗಂಟೆಗೆ ಟೇಕಾಫ್ ಆಗಲಿದೆ ಎಂಬ ಮಾಹಿತಿಯನ್ನು ಸಿಬ್ಬಂದಿ ನೀಡಿಲ್ಲ. ದೆಹಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ಗೆ ಸಮಸ್ಯೆಯಾಗಿದೆ.
