ಬೆಂಗಳೂರು: 2016 ರಲ್ಲಿ ನೋಟು ನಿಷೇಧ ಜಾರಿ ಆದಾಗ ದೇಶದ ನಗರ ಆರ್ಥಿಕತೆ ಪಾತಾಳ ಸೇರಿತು. ಆದರೆ, ಗ್ರಾಮೀಣ ಭಾರತದ ಆರ್ಥಿಕತೆ ಕುಸಿಯದಂತೆ ತಡೆದದ್ದು ಸಹಕಾರಿ ತತ್ವ ಮತ್ತು ಸಹಕಾರಿ ಚಳವಳಿಯ ಮೌಲ್ಯ ಎನ್ನುವುದನ್ನು ನಾವು ಮರೆಯಬಾರದು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ಪತ್ರಕರ್ತರ ಸಹಕಾರಿ ಸಂಘಕ್ಕೆ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಆಯೋಜಿಸಿದ್ದ “ಅಮೃತ ಸಂಭ್ರಮ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಚಳವಳಿ ಜೊತೆ ಜೊತೆಗೇ ನಡೆದದ್ದು ನಮ್ಮ ದೇಶದ ಸಹಕಾರ ಚಳವಳಿ. ಮಹಾತ್ಮಗಾಂಧಿ ದೇಶದ ಸ್ವಾತಂತ್ರ್ಯಕ್ಕಾಗಿ 1920 ರಲ್ಲಿ “ಅಸಹಾಕಾರ ಚಳವಳಿಗೆ” ಕರೆ ಕೊಡುವ ಮೊದಲೇ ರಾಜ್ಯದಲ್ಲಿ 1904 ರಲ್ಲಿ ಸಹಕಾರ ಕಾಯ್ದೆ ಜಾರಿ ಆಗಿತ್ತು. ದುಡಿಯುವ ವರ್ಗಗಳ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ನಡೆದ ಸಹಕಾರ ಚಳವಳಿಯ ಭಾಗವಾಗಿ “ಪತ್ರಕರ್ತರ ಸಹಕಾರ ಸಂಘವೂ ಜನ್ಮ ತಾಳಿದೆ”. ಈ ಸಂಘದ ಸ್ಥಾಪನೆಗೆ ಮುನ್ನುಡಿ ಬರೆದ ಎಲ್ಲಾ ಹಿರಿಯರನ್ನೂ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದರು.
ಸಹಕಾರಿ ಸಂಘಗಳು, ಸ್ವ-ಸಹಾಯ ಸಂಘಗಳ ಚಳವಳಿಗಳು ಇಂದಿರಾಗಾಂಧಿಯವರ ಬ್ಯಾಂಕ್ ಗಳ ರಾಷ್ಟ್ರೀಕರಣಕ್ಕೆ ಪ್ರೇರಣೆ ಆಗಿದ್ದವು. ಇದನ್ನೂ ಓದಿ: ಧರ್ಮದ ಉಳಿವಿಗಾಗಿ ಧರ್ಮಯುದ್ಧ: ಶಾಸಕ ಸತೀಶ್ ರೆಡ್ಡಿ
“ಪರಸ್ಪರ” ಎನ್ನುವುದು ಸಹಕಾರ ತತ್ವದ ಮೂಲ ಮೌಲ್ಯ ಆಗಿರುವಂತೆಯೇ ಪತ್ರಿಕೋದ್ಯಮದ ಮೂಲ ಮಂತ್ರವೂ ಇದೇ ಆಗಿದೆ. ಪತ್ರಕರ್ತರು ಸಹಕಾರ ಸಂಘ ಸ್ಥಾಪಿಸುವ ಮೊದಲೇ ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನುಗಾರರ ಸಹಕಾರ ಸಂಘಗಳು ಸ್ಥಾಪನೆ ಆಗಿದ್ದವು. ದುಡಿಯುವ ವರ್ಗಗಳನ್ನು, ಶ್ರಮಿಕ ಸಮುದಾಯಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಸಹಕಾರಿ ಮನೋಭಾವದಿಂದಲೇ ಪತ್ರಕರ್ತರ ಸಹಕಾರ ಸಂಘವನ್ನೂ ನಮ್ಮ ಹಿರಿಯರು ಸ್ಥಾಪಿಸಿದರು.
ಪತ್ರಕರ್ತರು ಮತ್ತು ಪತ್ರಿಕಾ ಕಾರ್ಮಿಕರು ರಾಷ್ಟ್ರೀಯ ಬ್ಯಾಂಕ್ ಗಳ ಪಾಲಿಗೆ ಹೊರಗಿನವರು. ನಾನೂ ಸಹ ಗೃಹ ಸಾಲ ಪಡೆಯುವಾಗ ಸಿಕ್ಕಾಪಟ್ಟೆ ರಗಳೆ ಅನುಭವಿಸಿದೆ.
ಪತ್ರಕರ್ತರಿಗೆ ಖಾಸಗಿಯಾಗಿ ಸಾಲ ಕೊಡುವವರೂ ಇಲ್ಲ. ವಾಪಾಸ್ ಕೇಳೋದು ಕಷ್ಟ ಎನ್ನುವ ಭಯ ಖಾಸಗಿಯವರಿಗೆ ಇದ್ದೇ ಇದೆ. ಹೀಗಾಗಿ ಈ ಸಂಘದಲ್ಲಿ ನಾವೇ ಪರಸ್ಪರ ಒಬ್ಬರಿಗೊಬ್ಬರು ಜಾಮೀನು ಆಗುವ ಮೂಲಕ ಪರಸ್ಪರರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದೇವೆ. ಕಷ್ಟದಲ್ಲಿದ್ದಾಗ ಜಾಮೀನು ಹಾಕಿಸಿಕೊಂಡವರು, ಜಾಮೀನು ಹಾಕಿದವರಿಗೆ ವಂಚಿಸಬಾರದು ಎಂದು ನನ್ನ ವಿನಂತಿ. “ಪರಸ್ಪರತೆ” ಮೌಲ್ಯ ಕಾಪಾಡದಿದ್ದರೆ ಸಹಕಾರ ಬ್ಯಾಂಕ್ ಗಳು ಯಶಸ್ವಿಯಾಗುವುದು ಕಷ್ಟ.
ನಿವೇಶನ ಖರೀದಿ ಮತ್ತು ಗೃಹ ನಿರ್ಮಾಣಕ್ಕೆ ನೆರವಾಗುವ ಉದ್ದೇಶದಿಂದ 1949ರಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಕೇವಲ ರೂ. 353.12 ದುಡಿಯುವ ಬಂಡವಾಳ ದೊಂದಿಗೆ ಆರಂಭವಾಗಿ ಈಗ ರೂ. 10ಕೋಟಿಗೂ ಮೀರಿದ ದುಡಿಯುವ ಬಂಡವಾಳ ಹೊಂದಿ, ನಿರಂತರ ನಿವ್ವಳ ಲಾಭವನ್ನೂ ಗಳಿಸುತ್ತಿರುವುದು ಸಂತೋಷದ ವಿಷಯ ಎಂದರು.
