ಪೋರ್ಟೊ ರಿಕೊ: ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ ಅವರು 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಸ್ಯಾನ್ ಜುವಾನ್‌ನ ಕೊಲಿಸಿಯೊ ಡಿ ಪೋರ್ಟೊ ರಿಕೊ ಜೋಸ್ ಮಿಗುಯೆಲ್ ಅಗ್ರೆಲೋಟ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ತವರಿನ ಪ್ರೇಕ್ಷಕರ ಸಮ್ಮುಖದಲ್ಲೇ ಅವರು ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡರು. ಈ ಮೂಲಕ ಪೋರ್ಟೊ ರಿಕೊ ಆರನೇ ಬಾರಿಗೆ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಡೊಮಿನಿಕನ್ ರಿಪಬ್ಲಿಕ್ ಮೊದಲ ರನ್ನರ್-ಅಪ್ ಸ್ಥಾನ ಪಡೆದಿದೆ.
ವಿಶ್ವದ ವಿವಿಧ ದೇಶಗಳ 115ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿದ 27 ವರ್ಷದ ಬ್ಯಾರೆಟೊ, ಸ್ಪರ್ಧೆಯ ವಿವಿಧ ಸುತ್ತುಗಳಲ್ಲಿ ಗಮನ ಸೆಳೆದು ಅಂತಿಮ ಐವರಲ್ಲಿ ಸ್ಥಾನ ಪಡೆದಿದ್ದರು. ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮುವ ಮೂಲಕ ತಮ್ಮ ದೇಶಕ್ಕೆ ಐತಿಹಾಸಿಕ ಗೌರವ ತಂದುಕೊಟ್ಟಿದ್ದಾರೆ.
ಇದಕ್ಕೂ ಮುನ್ನ ಪೋರ್ಟೊ ರಿಕೊ ಪರವಾಗಿ 1970ರಲ್ಲಿ ಮಾರಿಸೋಲ್ ಮಲಾರೆಟ್, 1985ರಲ್ಲಿ ಡೆಬೊರಾ ಕಾರ್ತಿ-ಡಿಯು, 1993ರಲ್ಲಿ ದಯಾನಾರಾ ಟೊರೆಸ್, 2001ರಲ್ಲಿ ಡೆನಿಸ್ ಕ್ವಿನೋನೆಸ್ ಮತ್ತು 2006ರಲ್ಲಿ ಜುಲೈಕಾ ರಿವೇರಾ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದರು. ಇದೀಗ ಬ್ಯಾರೆಟೊ ಅವರ ಗೆಲುವಿನೊಂದಿಗೆ 20 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ.
ಸ್ಯಾನ್ ಸೆಬಾಸ್ಟಿಯನ್ ಪ್ರತಿನಿಧಿಸಿದ್ದ ಬ್ಯಾರೆಟೊ, ಜೂನ್‌ನಲ್ಲಿ ಮಿಸ್ ಯೂನಿವರ್ಸ್ ಪೋರ್ಟೊ ರಿಕೊ 2026 ಪ್ರಶಸ್ತಿ ಗೆದ್ದಿದ್ದರು. ವಿಶೇಷವೆಂದರೆ, ಅವರು 2026ರ ಫೆಬ್ರವರಿಯಲ್ಲಷ್ಟೇ ಮೊದಲ ಬಾರಿಗೆ ರನ್‌ವೇ ಪ್ರವೇಶಿಸಿದ್ದರು. ಅಂದರೆ, ಸೌಂದರ್ಯ ಸ್ಪರ್ಧೆಯ ಕ್ಷೇತ್ರಕ್ಕೆ ಹೊಸಬರಾಗಿದ್ದರೂ ವಿಶ್ವಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಮನೋವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆದಿರುವ ಅವರು, ಸಮಾಜಕಾರ್ಯ ಕ್ಷೇತ್ರದಲ್ಲಿಯೂ ಪರಿಣತಿ ಹೊಂದಿದ್ದಾರೆ. ಅಮೆರಿಕದ ಟೆಕ್ಸಾಸ್‌ನ ಫೋರ್ಟ್ ಕ್ಯಾವಜೋಸ್‌ನಲ್ಲಿ ಕುಟುಂಬ ವಕಾಲತ್ತು ಕಾರ್ಯಕ್ರಮದಡಿ ಶಿಕ್ಷಕಿ ಹಾಗೂ ಬಿಕ್ಕಟ್ಟು ನಿರ್ವಹಣಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ. ಕೌಟುಂಬಿಕ ಹಿಂಸೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಒಳಗಾದವರಿಗೆ ನೆರವು ನೀಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ತಮ್ಮ ವೃತ್ತಿಪರ ಅನುಭವವನ್ನು ಮಿಸ್ ಯೂನಿವರ್ಸ್ ವೇದಿಕೆಯೊಂದಿಗೆ ಬೆಸೆದು, ಮಾನಸಿಕ ಆರೋಗ್ಯ, ತಡೆಗಟ್ಟುವಿಕೆ ಮತ್ತು ಸಮುದಾಯ ಕಲ್ಯಾಣದ ಕುರಿತು ಜಾಗೃತಿ ಮೂಡಿಸುವುದು ಅವರ ಗುರಿಯಾಗಿದೆ. 75ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತವರಿನಲ್ಲೇ ಕಿರೀಟ ಗೆದ್ದಿರುವುದು ಪೋರ್ಟೊ ರಿಕೊಗೆ ಹೆಮ್ಮೆಯ ಕ್ಷಣವಾಗಿದೆ.
