ಬೆಂಗಳೂರು: ಗ್ರಾಮೀಣ ಭಾಗದ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹಾಗೂ ಜ್ಞಾನಾರ್ಜನೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಹೆಚ್ಚುವರಿಯಾಗಿ 6,342 ಗ್ರಾಮ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ ನೂತನ ಗ್ರಾಮ ಗ್ರಂಥಾಲಯಗಳಿಗೆ ವಿಧ್ಯುಕ್ತ ಚಾಲನೆ ನೀಡಿದರು.
ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 5,888 ಅರಿವು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವು ಸಮುದಾಯ ಗ್ರಂಥಾಲಯ ಹಾಗೂ ಡಿಜಿಟಲ್ ಕಲಿಕಾ ಕೇಂದ್ರಗಳಾಗಿ ವಾರದ ಆರು ದಿನಗಳ ಕಾಲ ಕನಿಷ್ಠ ಎಂಟು ಗಂಟೆ ಕಾರ್ಯನಿರ್ವಹಿಸುತ್ತಿವೆ. ಇದೀಗ ಆರಂಭಿಸಿರುವ ಶಾಖಾ ಗ್ರಂಥಾಲಯಗಳು ವಾರಾಂತ್ಯದ ಎರಡು ದಿನಗಳ ಕಾಲ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಸಚಿವರು ತಿಳಿಸಿದರು.
ಸಾಮಾನ್ಯವಾಗಿ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ನಾಲ್ಕೈದು ಗ್ರಾಮಗಳು ಇರುತ್ತವೆ. ಆದರೆ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಮಾತ್ರ ಅರಿವು ಕೇಂದ್ರವಿದ್ದು, ಉಳಿದ ಗ್ರಾಮಗಳ ಜನರಿಗೆ ಗ್ರಂಥಾಲಯ ಸೌಲಭ್ಯ ಲಭ್ಯವಿರಲಿಲ್ಲ. ಈ ಸಮಸ್ಯೆ ನಿವಾರಿಸಲು ಪ್ರತಿ ಗ್ರಾಮದಲ್ಲಿ ತಲಾ ನಾಲ್ಕು ಲಕ್ಷ ರೂಪಾಯಿ ವೆಚ್ಚದಲ್ಲಿ ಶಾಖಾ ಗ್ರಂಥಾಲಯಗಳನ್ನು ಆರಂಭಿಸಲಾಗಿದೆ ಎಂದರು.
ಗ್ರಾಮೀಣ ಮಕ್ಕಳ ಕಲಿಕೆಗೆ ಹೊಸ ಆಯಾಮ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಗ್ರಂಥಾಲಯಗಳ ಮಹತ್ವವನ್ನು ಪ್ರತಿಪಾದಿಸಿದ್ದರು. ಗ್ರಾಮೀಣ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಈ ಹೊಸ ಗ್ರಂಥಾಲಯಗಳು ನೆರವಾಗಲಿವೆ. ಪುಸ್ತಕವನ್ನು ತಲೆತಗ್ಗಿಸಿ ಓದಿದರೆ, ಅದೇ ಪುಸ್ತಕ ನಮ್ಮನ್ನು ತಲೆ ಎತ್ತಿ ಬದುಕುವಂತೆ ಮಾಡುತ್ತದೆ ಎಂದು ಖಂಡ್ರೆ ಹೇಳಿದರು.
ಇಂದಿನ ಮಕ್ಕಳು ಮತ್ತು ಯುವಜನರು ಮೊಬೈಲ್ ರೀಲ್ಸ್ ಹಾಗೂ ವಿಡಿಯೋ ಗೇಮ್ಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅವರಲ್ಲಿ ಓದುವ ಆಸಕ್ತಿ ಬೆಳೆಸಲು ಗ್ರಾಮ ಗ್ರಂಥಾಲಯಗಳು ಪ್ರೇರಣೆಯಾಗಲಿವೆ. ಪುಸ್ತಕ ಖರೀದಿಸಲು ಆರ್ಥಿಕ ಸಾಮರ್ಥ್ಯವಿಲ್ಲದ ಗ್ರಾಮೀಣ ವಿದ್ಯಾರ್ಥಿಗಳಿಗೂ ಉಚಿತವಾಗಿ ಪುಸ್ತಕ ಓದುವ ಅವಕಾಶ ದೊರೆಯಲಿದೆ. ಓದುವ ಹವ್ಯಾಸ ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಡಿಜಿಟಲ್ ಕಲಿಕಾ ಸೌಲಭ್ಯಕ್ಕೂ ಆದ್ಯತೆ
ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಿ ಡಿಜಿಟಲ್ ಕಲಿಕಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ವಿಕಲಚೇತನ ಮಕ್ಕಳಿಗೂ ಅನುಕೂಲವಾಗುವ ಕಲಿಕಾ ಸಾಧನಗಳನ್ನು ನೀಡಲಾಗಿದೆ. ದೃಷ್ಟಿ ಮತ್ತು ಶ್ರವಣ ಸಮಸ್ಯೆಯುಳ್ಳ ಮಕ್ಕಳ ಕಲಿಕೆಗಾಗಿ 899 ಬೀಕನ್ ಲೈಬ್ರರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
51 ಲಕ್ಷ ಮಕ್ಕಳಿಗೆ ಉಚಿತ ಸದಸ್ಯತ್ವ
ಅರಿವು ಕೇಂದ್ರಗಳಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳಿಗೆ ಉಚಿತ ಗ್ರಂಥಾಲಯ ಸದಸ್ಯತ್ವ ನೀಡಲಾಗುತ್ತಿದೆ. ಗ್ರಂಥಾಲಯದಿಂದ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಓದುವ ಸೌಲಭ್ಯವೂ ಇದೆ. ಈ ಯೋಜನೆಯಡಿ ರಾಜ್ಯದ ಗ್ರಾಮೀಣ ಗ್ರಂಥಾಲಯಗಳಲ್ಲಿ ಈಗಾಗಲೇ 51 ಲಕ್ಷಕ್ಕೂ ಹೆಚ್ಚು ಮಕ್ಕಳು ಸದಸ್ಯತ್ವ ಪಡೆದಿದ್ದಾರೆ.
ಇದೇ ವೇಳೆ ಅರಿವು ಕೇಂದ್ರಗಳಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುವವರಿಗೆ ಮಾಸಿಕ 19,201 ರೂಪಾಯಿ ಸಂಭಾವನೆ ಖಾತ್ರಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
