ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ, ನ್ಯಾಯಯುತ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿನ ರೈತರ ಶೋಷಣೆ ತಡೆಗಟ್ಟುವ ಕುರಿತು ಬೆಂಗಳೂರಿನಲ್ಲಿ ನಡೆದ ಕಬ್ಬು ಬೆಳೆಗಾರರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.
ಬರಗಾಲದಲ್ಲಿ ಕಬ್ಬಿನ ಸಸಿಗೆ ನೀರಿಲ್ಲದ ಪರಿಸ್ಥಿತಿಯನ್ನು ಬಿಂಬಿಸುವಂತೆ ಹನಿ ನೀರು ಸುರಿಯುವ ಮೂಲಕ ವಿಚಾರ ಸಂಕಿರಣವನ್ನು ವಿಶಿಷ್ಟವಾಗಿ ಉದ್ಘಾಟಿಸಲಾಯಿತು. ಎಕರೆಗೆ 170 ಟನ್ ಕಬ್ಬು ಬೆಳೆದು ವಿಶ್ವ ದಾಖಲೆ ನಿರ್ಮಿಸಿರುವ ಮಹಾರಾಷ್ಟ್ರದ ಕೃಷಿರತ್ನ ಡಾ. ಸಂಜೀವ್ ಮಾನೆ ಉದ್ಘಾಟಿಸಿದರು.
ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದ ಕಬ್ಬಿನ ರಸವನ್ನು ಮೊಲಾಸಿಸ್ ಉತ್ಪಾದನೆಗೆ ಬಳಸಿಕೊಂಡು ಎಥನಾಲ್ ತಯಾರಿಸುತ್ತಿರುವುದರಿಂದ ಸಕ್ಕರೆ ಇಳುವರಿ ಕಡಿಮೆಯಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಮಹಾರಾಷ್ಟ್ರದಲ್ಲಿ 220 ಸಕ್ಕರೆ ಕಾರ್ಖಾನೆಗಳಿದ್ದು, ರೈತರಿಗೆ 10 ದಿನಗಳೊಳಗೆ ಕಬ್ಬಿನ ಹಣ ಪಾವತಿಸಲಾಗುತ್ತಿದೆ. ರೈತರು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಇಳುವರಿ ಹೆಚ್ಚಿಸಿಕೊಳ್ಳಬೇಕು ಎಂದರು.
ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಮುಖಂಡ ಹರಿಯಾಣದ ಅಭಿಮನ್ಯು ಕೋಹರ್ ಮಾತನಾಡಿ, ಸ್ವಾಮಿನಾಥನ್ ವರದಿ ಪ್ರಕಾರ ಕಬ್ಬಿನ ಬೆಲೆ ಟನ್ಗೆ ₹6,000 ನಿಗದಿಪಡಿಸಬೇಕು. ಪಂಜಾಬ್ನಲ್ಲಿ ₹4,840 ನಿಗದಿಯಾಗಿದೆ. ದೇಶದ ರೈತರು ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.
ಉತ್ತರ ಪ್ರದೇಶ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ರಜುವೀರ್ ಸಿಂಗ್ ಮಾತನಾಡಿ, ಕಬ್ಬಿನ ಹಣ ಪಾವತಿಯಲ್ಲಿ ವಿಳಂಬವಾಗುತ್ತಿದ್ದು, 14 ದಿನಗಳ ನಂತರ ಪಾವತಿಸುವ ಕಾರ್ಖಾನೆಗಳು ಶೇ.15ರಷ್ಟು ಬಡ್ಡಿ ನೀಡಬೇಕೆಂಬ ನಿಯಮ ಜಾರಿಯಾಗಬೇಕು ಎಂದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕರ್ನಾಟಕದ 82 ಸಕ್ಕರೆ ಕಾರ್ಖಾನೆಗಳಿಗೆ ವಾರ್ಷಿಕ 10 ಕೋಟಿ ಟನ್ ಕಬ್ಬು ಅಗತ್ಯವಿದ್ದರೂ, ಬರಗಾಲದಿಂದ ಪ್ರಸಕ್ತ ವರ್ಷ ಕೇವಲ 5 ಕೋಟಿ ಟನ್ ಕಬ್ಬು ಮಾತ್ರ ಲಭ್ಯವಾಗುವ ನಿರೀಕ್ಷೆಯಿದೆ ಎಂದರು.
ಪ್ರಸಕ್ತ ಸಾಲಿನ ಎಫ್ಆರ್ಪಿ ದರವನ್ನು ಟನ್ಗೆ ₹3,650ರಿಂದ ₹4,500ಕ್ಕೆ ಹೆಚ್ಚಿಸಬೇಕು, ಸಕ್ಕರೆ ಇಳುವರಿ ಮಾನದಂಡವನ್ನು ಶೇ.10.25ರಿಂದ ಶೇ.8.5ಕ್ಕೆ ಇಳಿಸಬೇಕು, ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ರೈತರ ಮೇಲೆ ಹಾಕಬಾರದು, ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೆ ಶೇ.70ರಷ್ಟು ಪಾಲು ನೀಡಬೇಕು ಹಾಗೂ ಕಬ್ಬಿನ ತೂಕದಲ್ಲಿನ ವಂಚನೆ ತಡೆಯಲು ಎಲೆಕ್ಟ್ರಾನಿಕ್ ತೂಕದ ಯಂತ್ರ ಅಳವಡಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮರಡಿ, ತಮಿಳುನಾಡಿನ ರೈತ ಮುಖಂಡ ರಾಮನಗೌಂಡರ್ ಮಾತನಾಡಿದರು. ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ್ ಸ್ವಾಗತಿಸಿದರು. ಸುರೇಶ್ ಎಂ. ಪಾಟೀಲ್, ಬರಡನಪುರ ನಾಗರಾಜ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
