ಶಹಾಪುರ: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಸಂಪುಟದಲ್ಲಿ ಕ್ಷೇತ್ರದ ಜನಪ್ರಿಯ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಬೇಕು ಎಂದು ಕಾಂಗ್ರೆಸ್ ಮುಖಂಡರಿAದ ಸಂಸದ ಜಿ.ಕುಮಾರ ನಾಯಕ್ ಅವರಿಗೆ ಮನವಿ ಮಾಡಿದರು.
ನಗರದಲ್ಲಿ ಕಾಂಗ್ರೆಸ್ ಕಚೇರಿ ಭೂಮಿ ಪೂಜೆಗೆ ಆಗಮಿಸಿದ್ದ ವೇಳೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಈ ಕುರಿತು ಮನವಿ ಮಾಡಿ ಮಾತನಾಡಿ ಸಚಿವ ಸ್ಥಾನಕ್ಕೆ ಸಮರ್ಥರಾಗಿರುವ ಶಾಸಕ ದರ್ಶನಾಪುರ ಅವರು ತಮಗೆ ಒದಗಿಬಂದ ಸಚಿವ ಸ್ಥಾನಗಳಿಂದ ಜನಪರ ಆಡಳಿತ ನೀಡಿ. ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕೊಡುಗೆ ಸಲ್ಲಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ಈಗಾಗಲೇ ಮೂರು ಬಾರಿ ಸಚಿವರಾಗಿ ಕಾರ್ಯನಿರ್ವಹಿಸಿರುವ ಅವರಿಗೆ ನಾಲ್ಕನೇ ಬಾರಿಗೆ ಸಚಿವ ಸ್ಥಾನ ಸಿಗಲು ತಾವು ಸಹ ಸತತ ಪ್ರಯತ್ನ ಮಾಡಬೇಕು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಅವರ ಸೇವೆ ಮಹತ್ವದ್ದಾಗಿದೆ. ಕರ್ನಾಟಕ ಸಂಪುಟದಲ್ಲಿ ಇನ್ನೂ ಇಪ್ಪತ್ತು ಸಚಿವ ಸ್ಥಾನಗಳು ಖಾಲಿಯಿದೆ. ಸಂಪುಟ ವಿಸ್ತರಣೆ ಏನಿದ್ದರೂ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಮುಖ್ಯಮಂತ್ರಿ ಶಿವಕುಮಾರ ಕಡ್ಡಿಮುರಿದ ಹಾಗೆ ಹೇಳಿದ್ದಾರೆ. ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿ ಸ್ಥಾನ ನೀಡುವಂತೆ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಮಲ್ಲಣಗೌಡ ತಿಪ್ಪನಹಳ್ಳಿ, ಅಲ್ಲಾ ಪಟೇಲ್ ಮಕ್ತಾಪುರ, ರಾಮಣ್ಣ ಸಾದ್ಯಾಪುರ, ರಾಯಪ್ಪ ಚಲುವಾದಿ, ರವಿ ರಾಜಾಪುರ, ರಾಜು ಚಂದಾಪುರ ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು.
