ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಕಳೆದ ಕೆಲವು ತಿಂಗಳ ಹಿಂದೆ ರಿಕ್ಕಿ ರೈ ಅವರ ಒಡೆತನದ ಲ್ಯಾಂಬೋರ್ಗಿನಿ ಕಾರಿನಿಂದ ಎಂಜಿ ರಸ್ತೆ ಹಾಗೂ ಕಬ್ಬನ್ ಪಾರ್ಕ್ ಸುತ್ತಮುತ್ತಲಿನಲ್ಲಿ ಡ್ರಿಫ್ಟಿಂಗ್ ಮಾಡಲಾಗಿತ್ತು ಎಂದು ದೂರು ಕೂಡ ದಾಖಲಾಗಿದ್ದು, ದೂರು ದಾಖಲಾಗುತ್ತಿದ್ದಂತೆ ಕೋರ್ಟ್ ಮೆಟಿಲೇರಿದ ಕೇಸ್ಗೆ ಸಂಬಂಧಿಸಿದಂತೆ ರಿಕ್ಕಿ ರೈ ದಂಡ ಕೂಡ ವಿಧಿಸಿದರು.
ಅಷ್ಟಾದರೂ ಬುದ್ಧಿ ಕಲಿಯದ ರಿಕ್ಕಿ ರೈ ಸಾರ್ವಜನಿಕರಿಗೆ ತೊಂದರೆಯಾಗುವಂತೆ ತಮ್ಮಒಡೆತನದ ಲ್ಯಾಂಬೋರ್ಗಿನಿ ಕಾರನ್ನು ಡ್ರಿಫ್ಟಿಂಗ್ ಮಾಡಿ ಓಡಿಸಿರುವ ವಿಡಿಯೋ ತುಣುಕಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಹೌದು, ನಗರದ ಏರ್ಪೋರ್ಟ್ ರಸ್ತೆಯಲ್ಲಿ ಕಾರು ಡ್ರಿಫ್ಟಿಂಗ್ ಮಾಡಿರುವುದು ಹಾಗೂ ಸೈಲೆನ್ಸರ್ನಿಂದ ಬೆಂಕಿ ಉಗುಳುತ್ತಾ ಕರ್ಕಶ ಶಬ್ದ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಪೊಲೀಸರ ಗಮನ ಸೆಳೆದಿದೆ.
ಕೆಎ-05-ಎನ್ಆರ್-0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರಿನ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಘಟನೆ ನಡೆದಿರುವ ಸ್ಥಳ ಹಾಗೂ ಸಂಬಂಧಿತ ಪೊಲೀಸ್ ಠಾಣೆ ವ್ಯಾಪ್ತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ಮಾಹಿತಿ ಆಧರಿಸಿ ಮೊದಲು ಪ್ರಕರಣ ದಾಖಲಿಸಿ ಬಳಿಕ ತನಿಖೆ ಮುಂದುವರಿಸುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.
ವಾಹನವನ್ನು ಯಾವ ದಿನ ಮತ್ತು ಸಮಯದಲ್ಲಿ ಚಲಾಯಿಸಲಾಗಿದೆ, ಆ ಸಂದರ್ಭದಲ್ಲಿ ಕಾರಿನಲ್ಲಿದ್ದವರು ಯಾರು ಹಾಗೂ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಯಾರು ಎಂಬುದರ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಸ್ಪಷ್ಟತೆ ಇಲ್ಲದೇ ಕೆಲಸ ಮಾಡಲು ಹೋದರೆ ತೊಂದರೆಯಾಗುತ್ತದೆ: ಕೃಷ್ಣ ಬೈರೇಗೌಡ
ವೈರಲ್ ವಿಡಿಯೋವನ್ನು ಪರಿಶೀಲಿಸುತ್ತಿರುವ ಪೊಲೀಸರು, ನಿಯಮ ಉಲ್ಲಂಘನೆ ದೃಢಪಟ್ಟರೆ ಅತಿವೇಗದ ಚಾಲನೆ, ಸೈಲೆನ್ಸರ್ ಮಾರ್ಪಾಡು, ಸೈಲೆನ್ಸರ್ನಿಂದ ಬೆಂಕಿ ಉಗುಳಿಸುವಿಕೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯ ಕರ್ಕಶ ಶಬ್ದ ಸೃಷ್ಟಿಸಿದ ಆರೋಪಗಳಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.
