ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೆಣ್ಣು ಮಕ್ಕಳ ಫೋಟೋಗಳನ್ನು ಎಐ ಮೂಲಕ ಎಡಿಟ್ ಮಾಡಿ ಅಪ್ಲೋಡ್ ಮಾಡಿ ಹೆಣ್ಣು ಮಕ್ಕಳಿಗೆ ಅಪಮಾನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಅದರಲ್ಲೂ ಕೂಡ ಪ್ರಮುಖವಾಗಿ ಸಿನಿ ತಾರೆಯರ ಫೋಟೋಗಳನ್ನ ಡೀಪ್ ಎಡಿಟ್ ಮಾಡಿ ಅಪ್ಲೋಡ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ.
ಹೌದು, ಕಾಂತಾರ ಚಿತ್ರದ ಬೆಡಗಿ ರುಕ್ಮಿಣಿ ವಸಂತ್ ಅವರ ಫೋಟೋಗಳನ್ನು ಬಿಕ್ನಿ ಹಾಕಿರುವ ರೀತಿ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿರುವವರ ವಿರುದ್ಧ ಈಗಾಗಲೇ ರುಕ್ಮಿಣಿವ ದೂರು ದಾಖಲಿಸಿದ್ದು, ಇದೀಗ ಈ ಪ್ರಕರಣದ ತನಿಖೆ ಚುರುಕಾಗಿ ನಡೆಯುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
ನಟಿ ರುಕ್ಮಿಣಿ ವಸಂತ ಅವರು ನೀಡಿದ ದೂರು ಹಿನ್ನೆಲೆಯಲ್ಲಿ ಸಿಸಿಬಿ ಸೈಬರ್ ಪೊಲೀಸರು ಸಕ್ರಿಯರಾಗಿದ್ದು, ಅಶ್ಲೀಲ ಮತ್ತು ಮಾರ್ಫ್ ಮಾಡಿದ ಚಿತ್ರಗಳನ್ನು ಹಂಚಿದ ಐಡಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಈ ಸಂಬಂಧ ಸೈಬರ್ ಪೊಲೀಸರು ವಿವಿಧ ಸಾಮಾಜಿಕ ಜಾಲತಾಣ ಸೇವಾ ಒದಗಿಸುವ ಕಂಪನಿಗಳಿಗೆ ಪತ್ರ ಬರೆದು, ಆ ಪೋಸ್ಟ್‌ಗಳನ್ನು ಹಂಚಿದ ಖಾತೆಗಳ ವಿವರಗಳನ್ನು ನೀಡುವಂತೆ ಕೋರಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹತ್ತಾರು ಐಡಿಗಳ ಮೂಲಕ ಈ ರೀತಿಯ ಪೋಸ್ಟ್‌ಗಳು ಹರಡಿರುವುದು ಗಮನಕ್ಕೆ ಬಂದಿದ್ದು, ಅವುಗಳ ಮೂಲವನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೆಟ್ರೋದಲ್ಲಿ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡುವಂತೆ ಸಿಎಂ ಡಿಕೆಶಿಗೆ ಮನವಿ
ಸೈಬರ್ ಅಪರಾಧ ಜಾಲದ ಭಾಗವಾಗಿರಬಹುದು ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಆರೋಪಿಗಳ ಗುರುತು ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
