ದೆಹಲಿ: ರಾಜ್ಯ ಕಾಂಗ್ರೆಸ್ ನಾಯಕರನ್ನ ಕಾಂಗ್ರೆಸ್ ಹೈಕಮಾಂಡ್ ಕರೆ ಮೇರೆಗೆ ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದು, ಇದೀಗ ಸಿಎಂ ಕರ್ಚಿ ಕದನಕ್ಕೆ ಮಹತ್ವದ ಸಭೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಡಿಕೆ ಶಿವಕುಮಾರ್ ಅವರು ಗುಂಪು ಕಟ್ಟಿಕೊಂಡು ಹೋಗಿ ರಾಜಕೀಯ ಮಾಡುತ್ತಾರೆ ಎಂಬ ಮಾತಿಗೆ ಇದೀಗ ಮಾಗಡಿ ಶಾಸಕ ಬಾಲಕೃಷ್ಣ ಅವರು ಪ್ರತಿಕ್ರೀಯಿಸಿದ್ದು, ಡಿಕೆ ಶಿವಕುಮಾರ್ ಅವರು ಗುಂಪು ಕಟ್ಟಿಕೊಂಡು ರಾಜಕೀಯ ಮಾಡುವ ವ್ಯಕ್ತಿ ಅವರಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಇಂದು (ಮಂಗಳವಾರ ಮೇ 26) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಮತ್ತು ಡಿಸಿಎಂ ಇಬ್ಬರನ್ನೂ ದೆಹಲಿಗೆ ಕರೆದಿದ್ದಾರೆ ಏನಾದರೂ ಒಂದು ತೀರ್ಮಾನ ಆಗಬಹುದು. ಇರುವ ಗೊಂದಲ ಪರಿಹಾರ ಆಗಬೇಕು, ಎಲ್ಲವೂ ತಿಳಿ ಆಗಬೇಕು. ಎಲ್ಲದಕ್ಕೂ ಹೈಕಮಾಂಡ್ ತೆರೆ ಎಳೆಯಬೇಕು ಎಂದು ಹೇಳಿದರು. ಇದನ್ನೂ ಓದಿ: ಸಿಎಂ ಕುರ್ಚಿ ಕದನಕ್ಕೆ ಮುಹೂರ್ತ ಫಿಕ್ಸ್!?
ಇದೇ ವೇಳೆ ಸಿಎಂ ಜೊತೆಗೆ ಆಪ್ತ ಸಚಿವರು ದೆಹಲಿಗೆ ಪ್ರಯಾಣಿಸಿರುವ ವಿಚಾರ ಕುರಿತು ಮಾತನಾಡಿ, ಡಿ.ಕೆ ಶಿವಕುಮಾರ್ ಗುಂಪು ಕಟ್ಟಿಕೊಂಡು ಹೋಗಿ ರಾಜಕೀಯ ಮಾಡುವವರಲ್ಲ. ಅವರು ಹೈಕಮಾಂಡ್ ನಿಷ್ಠೆಯಿಂದ ಇರುವವರು. ಸಿಎಂ ಸಹ ಯಾರನ್ನೂ ಕರೆದಿಲ್ಲ ಕುತೂಹಲಕ್ಕೆ ಸಹಜವಾಗಿ 3-4 ಸಚಿವರು ಹೋಗಿರಬಹುದು. ಸಿಎಂ ಜೊತೆ ಈ ಮೊದಲೂ ದೆಹಲಿಗೆ ಹೋಗುವಾಗ ಜೊತೆಗೆ ಸಚಿವರು ಹೋಗುತ್ತಿದ್ದರು, ಇದೇ ಮೊದಲಲ್ಲ. ಎಲ್ಲವೂ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
