ಮಹಾಂತೇಶ್ವರಿ ಹಾಸ್ಪಿಟಲ್ ಸೀಜ್/ ಪ್ರಜಾವಾಹಿನಿ ಫಲಸುದ್ದಿ
ಶಹಾಪುರ: ನಗರದ ಚರಬಸವೇಶ್ವರ ಗದ್ದುಗೆ ಹೋಗುವ ರಸ್ತೆಯಲ್ಲಿರುವ ನಕಲಿ ಮಹಾಂತೇಶ್ವರಿ ಕ್ಲಿನಿಕ್ ನಡೆಸುತ್ತಿರುವ ಶಾಂತಕುಮಾರ ಪಟ್ಟಣಶೆಟ್ಟಿ ಮೇಲೆ ಕ್ರಮ ಕೈಗೊಳ್ಳದ ಆರೋಗ್ಯ ಇಲಾಖೆ ಕೇವಲ ಆಸ್ಪತ್ರೆ ಸೀಜ್ ಮಾಡಿದ್ದು ಇದರಲ್ಲಿ ಕಾಣದ ಕೈಗಳಿಂದ ಆರೋಪಿಯನ್ನು ರಕ್ಷಿಸಲಾಗುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೇದಾರ ಆರೋಪಿಸಿದ್ದಾರೆ.
ಡಾ.ಸೀಮಾ ರವರ ಹೆಸರಿನ ಮೇಲೆ ಕೆಪಿಎಂಇ ನೋಂದಣಿ ಇತ್ತು. ಆದರೆ ಈ ಬಗ್ಗೆ ತಾಲೂಕ ಟಿಎಚ್‌ಓ ನೋಟಿಸ್ ಜಾರಿ ಮಾಡಿದ್ದರು, ಇದಕ್ಕೆ ಡಾ. ಸೀಮಾ ಅವರು ತನ್ನ ಪತಿಯ ಸಾವಿನ ನಂತರ ತನ್ನ ತವರು ಮನೆಯಾದ ಕಾರಟಗಿಯಲ್ಲಿ ಜೀವಿಸುತ್ತಿದ್ದೇನೆ. ಆದರೆ ಮಹಾಂತೇಶ್ವರಿ ದವಾಖಾನೆ ಹೆಸರಿನ ಖಾಸಗಿ ಕ್ಲಿನಿಕ್‌ನ್ನು ನಡೆಸಲು ಯಾವುದೇ ಅನರ್ಹ ವ್ಯಕ್ತಿಯನ್ನು ನೇಮಿಸಿಲ್ಲಾ. ಅಂತಹ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಕಾನೂನು ರಿತ್ಯಾ ಕ್ರಮ ಕೈಗೊಳ್ಳುವಂತೆ ಮರಳಿ ನೋಟಿಸ್‌ಗೆ ಉತ್ತರ ನೀಡಿದ್ದಾರೆ. ಇಷ್ಟಾದರೂ ಸಹ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕರಣ ಮುಚ್ಚಿ ಹಾಕುವ ಹುನ್ನಾರ ಮಾಡುತ್ತಿದ್ದು, ಇದಕ್ಕೆ ಮೇಲಾಧಿಕಾರಿಗಳು ಕಡಿವಾಣ ಹಾಕಬೇಕು. ಮತ್ತು ಇಂತಹ ನಕಲಿ ವೈದ್ಯರ ಜಾಲದ ಬಗ್ಗೆ ಗಮನಕ್ಕೀದ್ದರು, ಆರೋಗ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಕೈಕಟ್ಟಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಅರ್ಹತೆ ಹಾಗೂ ಪರವಾನಗಿ ಇಲ್ಲದಿದ್ದರೂ ಚಿಕಿತ್ಸೆ ನೀಡಿ, ಅನಧೀಕೃತವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಇಂತಹ ನಕಲಿ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಿದರೆ, ಮತ್ತೆ ನಕಲಿ ವೈದ್ಯರು ಹುಟ್ಟಿಕೊಳ್ಳಲು ಸಾಧ್ಯವಿಲ್ಲಾ ಆದ್ದರಿಂದ ದಿನದಿಂದ ದಿನಕ್ಕೆ ನಕಲಿ ಕ್ಲಿನಿಕ್ ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ, ಅಂತಹವರ ವಿರುದ್ಧ ಕಾನೂನಿನ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳು , ಕ್ಲಿನಿಕ್‌ಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.
5 ಲಕ್ಷ ದಂಡ ಜೈಲು ಶಿಕ್ಷೆ
ಆರೋಗ್ಯ ಇಲಾಖೆ ಪ್ರಕಾರ ವೈದ್ಯಕೀಯ ಮಂಡಳಿಗಳಲ್ಲಿ (ಆಲೋಪಥಿ ಆಯುರ್ವೇದ ಹೋಮಿಯೋಪಥಿ) ನೋಂದಾಯಿತರಾದವರು ಮಾತ್ರ ವೈದ್ಯಕೀಯ ವೃತ್ತಿ ನಡೆಸಲು ಅವಕಾಶವಿದೆ. ನೋಂದಾಯಿಸದೆ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಗರಿಷ್ಠ 5 ಲಕ್ಷ ದಂಡ ಹಾಗೂ ಮೂರು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಕೆಪಿಎಂಇ ಕಾಯ್ದೆಯಡಿ ನೋಂದಾಯಿಸದೆ ವೈದ್ಯಕೀಯ ಸಂಸ್ಥೆಯನ್ನು ನಡೆಸಿದರೆ ಗರಿಷ್ಠ 50 ಸಾವಿರ ದಂಡದ ಜತೆಗೆ ತಕ್ಷಣವೇ ಸಂಸ್ಥೆಯನ್ನು ಮುಚ್ಚಿಸಬೇಕು.
ನಕಲಿ ವೈದ್ಯ ಪತ್ತೆ
‘ನಕಲಿ ವೈದ್ಯ ಪತ್ತೆ, ನೋಟಿಸ್ ನೀಡಿ ಕೈತೊಳೆದುಕೊಂಡ ಇಲಾಖೆ’ ಎನ್ನುವ ಶೀರ್ಷಿಕೆಯಡಿ ಪ್ರಜಾವಾಹಿನಿ ಪತ್ರಿಕೆ ಸುದ್ದಿ ಪ್ರಕಟಿಸಿತ್ತು, ಇದಾದ ನಂತರ ಆರೋಗ್ಯ ಇಲಾಖೆ ಆಸ್ಪತ್ರೆಯನ್ನು ಸೀಜ್ ಮಾಡಿದೆ.
