ಹೊಸಕೋಟೆ: ಬೈಕ್ ಕಳ್ಳತನ ಮಾಡಿ ಸಾರ್ವಜನಿಕರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಅಂತರರಾಜ್ಯ ಕಳ್ಳರನ ಹೊಸಕೋಟೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಎಲ್ಲೆಂದರಲ್ಲಿ ಬೈಕ್ ಗಳನ್ನು ನಿಲ್ಲಿಸಿ ಹೋಗುತ್ತಿರುವುದನ್ನೇ ಬಂಡವಾಳ ಮಾಡಿಕೊಂಡಿದ್ದ ಬೈಕ್ ಖದೀಮರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಹೌದು, ಹೊಸಕೋಟೆ ಪೊಲೀಸರ ಭರ್ಜರಿ ಬೇಟೆಗೆ ಸುಮಾರು 55 ಲಕ್ಷ ಮೌಲ್ಯದ 50 ಬೈಕ್ ಗಳನ್ನ ವಶಪಡಿಸಿಕೊಂಡು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರನ್ನು ನರಸಿಂಹಮೂರ್ತಿ ಮತ್ತು ಪ್ರಸಾದ್ ಎಂದು ಗುರುತಿಸಲಾಗಿದೆ.
ಇನ್ನುಈ ಖದೀಮರು ತಮ್ಮ ದಿನನಿತ್ಯದ ಮೋಜು ಮಸ್ತಿಗಾಗಿ ಸಾರ್ವಜನಿಕರ ಬೈಕುಗಳನ್ನು ಕಳ್ಳತನ ಮಾಡಿ ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗೆ ಬೈಕುಗಳನ್ನ ಮಾರಾಟ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದರು. ಇದನ್ನೂ ಓದಿ: ಜಮೀರ್ ಅಹ್ಮದ್ ಮನೆಯಲ್ಲಿ ಸಂಬಂಧಿಕರಿಂದಲೇ ಕಳ್ಳತನ
ಹೊಸಕೋಟೆಯಲ್ಲಿ ಪಾನಿಪುರಿ ವ್ಯಾಪಾರಿಯೊಬ್ಬರ ಬೈಕ್ ಕಳವು ಮಾಡಿದ ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಈ ದೊಡ್ಡ ಜಾಲ ಪತ್ತೆಯಾಗಿದೆ. ಬಂಧಿತರು ಕೇವಲ ಹೊಸಕೋಟೆ ಮಾತ್ರವಲ್ಲದೆ ಕೋಲಾರ, ಮಾಲೂರು, ಬಂಗಾರಪೇಟೆ, ಕೆ.ಆರ್. ಪುರ ಮತ್ತು ಕಾಡುಗೋಡಿ ಭಾಗಗಳಲ್ಲಿಯೂ ತಮ್ಮ ಕೈಚಳಕ ತೋರಿಸುತ್ತಿದ್ದರು.
ಪ್ರಸ್ತುತ ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಹೊಸಕೋಟೆ ಪೊಲೀಸರು ಇಬ್ಬರನ್ನೂ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
