ಬೆಂಗಳೂರು: ಏಪ್ರಿಲ್ 24ರಂದು ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಮ್ಸ್ ಮಧ್ಯೆ ಪಂದ್ಯ ಏರ್ಪಡಿಸಲಾಗಿತ್ತು. ಈ ಪಂದ್ಯ ನಡೆವು ವೇಳೆಯಲ್ಲಿಯೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುಮಾರು 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಕೇಬಲ್ ಗಳನ್ನ ಕಟ್ ಮಾಡಿರುವ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಬಹಿರಂಗವಾಗಿದೆ.
ಹೌದು, ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ನಡುವಿನ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ಕೇಬಲ್ ಕಟ್ ಆಗಿರುವುದು ಪೊಲೀಸರಲ್ಲಿ ದೊಡ್ಡ ಆತಂಕ ಮೂಡಿಸಿತ್ತು. ಇದನ್ನೂ ಓದಿ: ಪಂದ್ಯ ನಡೆವಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರಿ ಭದ್ರತಾ ಲೋಪ!
ಕ್ರೀಡಾಂಗಣದ ಭದ್ರತೆಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ನಿರ್ವಹಣೆಯ ಹೊಣೆಯನ್ನು ‘IVS ಡಿಜಿಟಲ್ ಸೊಲ್ಯೂಷನ್’ ಎಂಬ ಕಂಪನಿಗೆ ಸಬ್ ಕಾಂಟ್ರ್ಯಾಕ್ಟ್ ನೀಡಲಾಗಿತ್ತು. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾಗೂ ಅಬ್ದುಲ್ ಕಲಾಂ ಎಂಬುವವರು ಈ ಕೃತ್ಯ ಎಸಗಿದ್ದಾರೆ ಎಂಬುದು ಪೊಲೀಸರ ವಿಚಾರಣೆಯಿಂದ ದೃಢಪಟ್ಟಿದೆ. ಆರೋಪಿಗಳಿಬ್ಬರಿಗೂ ಕಂಪನಿಯಿಂದ ಬರಬೇಕಿದ್ದ ಸಂಬಳ ಬಾಕಿ ಇತ್ತು. ಎಷ್ಟು ಕೇಳಿದರೂ ಕಂಪನಿ ಸಂಬಳ ನೀಡದಿದ್ದಕ್ಕೆ ಕೋಪಗೊಂಡಿದ್ದ ಈ ಸಿಬ್ಬಂದಿಗಳು, ಸಂಸ್ಥೆಗೆ ಮತ್ತು ಪೊಲೀಸರಿಗೆ ಪಾಠ ಕಲಿಸಲು ನಿರ್ಧರಿಸಿ ಸಿಸಿಟಿವಿ ಕೇಬಲ್ಗಳನ್ನು ಕತ್ತರಿಸಿದ್ದರು ಎಂದು ತಿಳಿದು ಬಂದಿದೆ.
