ರಾಣೇಬೆನ್ನೂರು: ನಮ್ಮ ನಾಡು, ನಮ್ಮ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕೆಂದು ಬುದ್ಧ, ಬಸವ, ಮಹಾತ್ಮಾ ಗಾಂಧಿ, ಅಂಬೇಡ್ಕರ್ , ಕುವೆಂಪು ಬಯಸಿದ್ದರು. ಅದನ್ನೇ ನಮ್ಮ ಸರ್ಕಾರ ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ರಾಣಿಬೆನ್ನೂರಿನ ನಿಟ್ಟೂರು ಗ್ರಾಮದಲ್ಲಿ ಇಂದು (ಭಾನುವಾರ ಏ.19) ಆಯೋಜಿಸಲಾಗಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ 50 ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಶ್ರೀ ಭಕ್ತ ಕನಕದಾಸರ ಮಹಾದ್ವಾರದ ಉದ್ಘಾಟನೆ ಹಾಗೂ ಧರ್ಮ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟ್ಟೂರಿನ ದೇವಸ್ಥಾನಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಬೀರಲಿಂಗೇಶ್ವರ ದೇವಸ್ಥಾನ ನಿಟ್ಟೂರಿಗೆ ಮಾತ್ರ ಸೀಮಿತವಾಗಿಲ್ಲ. ದೇವನೊಬ್ಬ ನಾಮ ಹಲವು ಎಂದು ಅರ್ಥೈಸಿಕೊಳ್ಳಬೇಕೆಂದರು.
ನಿಟ್ಟೂರಿನ ಸಾಮರಸ್ಯಕ್ಕೆ ದ್ಯೋತಕ
ಕೇವಲ 13 ಕುರುಬರ ಕುಟುಂಬಗಳಿರುವ ಊರಿನಲ್ಲಿ ಬೀರಲಿಂಗೇಶ್ವರ ದೇವಾಲಯ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ನಿಟ್ಟೂರಿನ ಸಾಮರಸ್ಯಕ್ಕೆ ದ್ಯೋತಕವಾಗಿದೆ ಎಂದರು.
ದೇವರನ್ನು ನಂಬಿ, ಮೂಢನಂಬಿಕೆಗಳನ್ನು ತ್ಯಜಿಸಿ
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಎಂಬ ವಿಚಾರಗಳು ಸಂವಿಧಾನದ ಆಧಾರ ಸ್ತಂಭಗಳು. ದೇವರ ಪೂಜೆ ಮಾಡಬೇಕು ಆದರೆ ಮೂಢ ನಂಬಿಕೆಗಳನ್ನು ಇಟ್ಟುಕೊಳ್ಳಬಾರದು. ಬಸವಣ್ಣ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದರು ಎನ್ನಿವುದನ್ನು ಸ್ಮರಿಸಬೇಕು ಎಂದರು.
ಅಂಬೇಡ್ಕರ್ ಅವರು ದೇಶದ ಸ್ವಾತಂತ್ರ್ಯ ಸಮಾಜಿಕ, ಆರ್ಥಿಕ ಸ್ವಾತಂತ್ರ್ಯದ ತಳಹದಿಯ ಮೇಲೆ ನಿಂತಿದೆ, ಇಲ್ಲದಿದ್ದರೆ ರಾಜಕೀಯ ಸ್ವಾತಂತ್ರ್ಯ ಯಶಸ್ವಿಯಾಗುವುದಿಲ್ಲ ಎಂದಿದ್ದರು. ಸಮಾನತೆಯ ಆಶಯದಿಂದಲೇ ಭಾಗ್ಯಗಳನ್ನು, ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವುದು ಎಂದರು.
