ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಹತ್ತಿರ ಫೋನ್ ಗಳು, ಸಿಮ್ ಸೇರಿದಂತೆ ಐಷಾರಾಮಿ ಜೀವನವನ್ನು ನಡೆಸುತ್ತಿರುವ ಪ್ರಕರಣ ಈಗಾಗಲೇ ಬೆಳಕಿಗೆ ಬಂದಿದ್ದರು ಕೂಡ ಮತ್ತೆ ಪರಪ್ಪನ ಅಗ್ರಹಾರದ ಕರ್ಮಕಾಂಡಗಳು ಒಂದಲ್ಲ ಒಂದು ಬೆಳಕಿಗೆ ಬರುತ್ತಲೇ ಇವೆ.
ಹೌದು, ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ತಪಾಸಣೆ ವೇಳೆ ಹತ್ತಕ್ಕೂ ಹೆಚ್ಚು ಮೊಬೈಲ್ ಗಳನ್ನು ಜೈಲು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಕಳೆದು ತಿಂಗಳು ಮಾರ್ಚ್ 29ರಂದು ಕೈದಿಗಳ ಕೋಣೆ ತಪಾಸಣೆ ವೇಳೆ ಹತ್ತಕ್ಕೂ ಹೆಚ್ಚು ಮೊಬೈಲ್ ಗಳು ಪತ್ತೆ ಆಗಿದ್ದು, ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಕೈದಿಗಳ ನಡುವೆ ಮಾತಿನ ಜಟಾಪಟಿ ನಡೆದಿದ್ದು, ಇದನ್ನು ಚದುರಿಸಲು ಜೈಲು ಅಧಿಕಾರಿಗಳು ಕೈದಿಗಳ ಮೇಲೆ ಲಘು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜೈಲು ಅಧೀಕ್ಷಕ ಕರ್ಣ ಕ್ಷತ್ರಿ ನೇತೃತ್ವದಲ್ಲಿ ವಿಚಾರಣಾ ಬಂಧಿಗಳ ವಿಭಾಗದ ಟವರ್-1ರಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕೆಲ ಕೈದಿಗಳು ತಪಾಸಣೆಗೆ ಅಡ್ಡಿಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಬಳಿಕ ಹಲ್ಲೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುವ ಹಂತಕ್ಕೆ ತಲುಪುತ್ತಿದ್ದಂತೆ ಜೈಲು ಸಿಬ್ಬಂದಿ ತಕ್ಷಣವೇ ಕ್ರಮ ಕೈಗೊಂಡು ಕೈದಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಇದನ್ನೂ ಓದಿ: ಇಂದು ಸಿಎಂ ಜಮೀರ್ ಅಹ್ಮದ್ ನಡುವೆ ಮಹತ್ವದ ಸಭೆ
ಜೈಲು ನಿಯಮ ಉಲ್ಲಂಘನೆ ಮತ್ತು ಗಲಾಟೆ ನಡೆಸಿದ ಆರೋಪದ ಮೇಲೆ ಸಂಬಂಧಿಸಿದ ಕೈದಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
