ಬೆಂಗಳೂರು: ಐತಿಹಾಸಿಕ ಕರಗ ಉತ್ಸವವು ಬೆಂಗಳೂರು ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ನೆರವೇರಿದ್ದು ಕರಗ ಉತ್ಸವವನ್ನು ನೋಡಲು ಭಕ್ತ ಸಾಗರವೇ ಹರಿದುಬಂದಿದೆ.
ಹೌದು, ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಈ ಶಕ್ತ್ಯೋತ್ಸವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಹರಿದುಬಂದರು. ಅರ್ಚಕ ಎ. ಜ್ಞಾನೇಂದ್ರ ಅವರು ಸತತ 16ನೇ ಬಾರಿಗೆ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡ ದ್ರೌಪದಮ್ಮನ ಕರಗವನ್ನು ಹೊತ್ತು ಸಾಗಿದರು.
ಧಾರ್ಮಿಕ ವಿಧಿವಿಧಾನಗಳ ಬಳಿಕ ಹಸಿ ಕರಗ ದೇವಸ್ಥಾನದಿಂದ ಹೊರಬಂದಾಗ ಭಕ್ತರ ಹರ್ಷೋದ್ಗಾರ ಮುಗಿಲುಮುಟ್ಟಿತು. ಕೈಯಲ್ಲಿ ಖಡ್ಗ ಹಿಡಿದು ‘ಗೋವಿಂದ.. ಗೋವಿಂದ..’ ಎಂಬ ನಾಮಸ್ಮರಣೆಯೊಂದಿಗೆ ಸಾಗಿದ ವೀರಕುಮಾರರ ಮೆರವಣಿಗೆ ವಿಶೇಷ ಕಳೆ ನೀಡಿತು.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಗರುಡಾಚಾರ್ ಹಾಗೂ ಎನ್.ಎ. ಹ್ಯಾರಿಸ್ ಸೇರಿದಂತೆ ಹಲವು ಗಣ್ಯರು ದ್ರೌಪದಮ್ಮನ ದರ್ಶನ ಪಡೆದರು. ಇದನ್ನೂ ಓದಿ: ಅಭ್ಯರ್ಥಿಗಳ ಗೆಲುವಿಗಾಗಿ ಹಜರತ್ ಖಡಕ್ ಶಾ ವಲಿ ದರ್ಗಾಗೆ ಭೇಟಿ ನೀಡಿದ ಸಿಎಂ
ಪ್ರತಿ ವರ್ಷದಂತೆ ಈ ಬಾರಿಯೂ ಕರಗವು ಹಜ್ರತ್ ತವಕ್ಕಲ್ ಶಾ ಮಸ್ತಾನ್ ದರ್ಗಾಗೆ ಭೇಟಿ ನೀಡಿ, ಮುಸ್ಲಿಂ ಬಾಂಧವರು ಸಾಂಪ್ರದಾಯಿಕವಾಗಿ ಸ್ವಾಗತಿಸಿ ಪೂಜೆ ಸಲ್ಲಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದರು.
