ನೀರಿಲ್ಲದೆ ಬತ್ತಿಹೊದ ಹಳ್ಳ, ಕೆರೆಗಳು!
ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಬೋರಿ ಹಳ್ಳದಲ್ಲಿ ನೀರಿಲ್ಲದೆ ಮತ್ತು ಸಾಂಕ್ರಾಮಿಕ ರೋಗದಿಂದಾಗಿ ನೂರಾರು ಪ್ರಾಣಿ, ಪಕ್ಷಿಗಳು ಸಾವನ್ನಪ್ಪಿರುವ ಘಟನೆಗೆ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಹಳ್ಳದಲ್ಲಿ ನೀರಿಲ್ಲದೆ ಅಲ್ಲಲ್ಲಿ ತಗ್ಗು ಪ್ರದೇಶದ ಕಲುಷಿತ ನೀರಿನಲ್ಲಿ ಮೀನುಗಳು ಸೇರಿದಂತೆ ಅನೇಕ ಜಲಚರ ಜೀವಿಗಳು ಸಾವಿನ ರಾಶಿಯನ್ನು ಕಂಡು ಗ್ರಾಮಸ್ಥರು ಪರಿಸರ ಮಾಲಿನ್ಯ ಉಂಟಾಗಿ ಮತ್ತು ಬೇಸಿಗೆಯ ಕಾಲದಲ್ಲಿ ಹಳ್ಳ ಸಂಪೂರ್ಣ ಬತ್ತಿರುವುದರಿಂದ ಪ್ರಾಣಿ, ಪಕ್ಷಿಗಳ ಸಾವಿಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳದ ಸುತ್ತ ಮುತ್ತ ನವಿಲುಗಳು, ಬಾತುಕೋಳಿಗಳು ಸೇರಿದಂತೆ ವಿವಿಧ ಪಕ್ಷಿಗಳು ಹಾಗೂ ಪ್ರಾಣಿಗಳು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ. ಹಳ್ಳದಲ್ಲಿ ನಿಂತ ನೀರು ದುರ್ವಾಸನೆಯಿಂದ ಕಲುಷಿತಗೊಡಿದ್ದು, ಇದನ್ನು ಕುಡಿದ ಪಕ್ಷಿಗಳು ಮತ್ತು ಪ್ರಾಣಿಗಳು ಸಾವನ್ನಪ್ಪಿತ್ತಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಇರುವುದರಿಂದ ಪಕ್ಷಿಗಳು ಹಳ್ಳದಲ್ಲಿ ನಿಂತ ನೀರನ್ನು ಕುಡಿಯಬೇಕು ಆದ ಅನಿವಾರ್ಯತೆಯ ಪರಿಣಾಮವಾಗಿ ಸಾವುಗಳು ಹೆಚ್ಚಾಗುತ್ತಿವೆ. ಹಳ್ಳದ ನಿರ್ವಹಣೆ, ಶುದ್ಧೀಕರಣ ಹಾಗೂ ನೀರಿನ ಸಂರಕ್ಷಣೆ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ಈ ದುರಂತಕ್ಕೆ ಕಾರಣ ಎಂಬುದು ಸಾರ್ವಜನಿಕರು ಆರೋಪ.
ಕೆಲ ರೈತರು ಬಳಸುವ ಕೀಟನಾಶಕ ಔಷಧಿಗಳು ಅಥವಾ ಸಮೀಪದ ಕೈಗಾರಿಕಾ ಘಟಕಗಳ ಮಾಲಿನ್ಯವು ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ನಿಖರ ಕಾರಣವನ್ನು ವೈಜ್ಞಾನಿಕ ತನಿಖೆಯ ನಂತರವೇ ತಿಳಿದು ಬರಬೇಕಾಗಿದೆ. ಕಲುಷಿತ ನೀರು ಕೆರೆ ಮತ್ತು ಹಳ್ಳಕ್ಕೆ ಹರಿಸುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು.
ಕೆರೆ ಮತ್ತು ಹಳ್ಳ ಕೊಳ್ಳದ ಪ್ರದೇಶಗಳಲ್ಲಿ ಅರಣ್ಯ ಇಲಾಖೆ, ಪರಿಸರ ಇಲಾಖೆ ಹಾಗೂ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಮಾದರಿ ಹಾಗೂ ಸಾವನ್ನಪ್ಪಿದ ಪಕ್ಷಿಗಳ ಮಾದರಿಗಳನ್ನು ಪರೀಕ್ಷಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಈ ದುರ್ಘಟನೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪ್ರಾಣಿ ಪಕ್ಷಿಗಳ ಸಂರಕ್ಷಣೆಗೆ ಮುಂದಾಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಇದನ್ನೂ ಓದಿ: ‘ಅಚ್ಛೇ ದಿನಗಳು’ ಹೋಗಿ ‘ಕಚ್ಚಾ ದಿನ’ಗಳು ಬಂದಿವೆ: ಡಿಕೆಶಿ
ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಹೋರಾಟ
ಹಳ್ಳದ ನೀರು ಕಲುಷಿತವಾಗಿದ್ದು ಅಲ್ಲಿಲ್ಲಿ ನಿಂತಿರುವುದರಿಂದ, ಬೆಸಿಗೆಯ ತಾಪದಿಂದ ಬಾಯಾರಿಕೆಯಾಗಿ ಪ್ರಾಣಿ ಪಕ್ಷಿಗಳು ನೀರು ಕುಡಿದು ಸಾವನ್ನಪ್ಪಿದ ಘಟನೆ ಕಂಡು ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಸ್ಥಳಿಯರಾದ ಸುರೇಶಗೌಡ ಪಾಟೀಲ ಎಚ್ಚರಿಕೆ ನೀಡಿದ್ದಾರೆ
ನೀರಿನ ಅಭಾವ ಹೆಚ್ಚಾಗಿದೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರಮುಖವಾಗಿ ಬೆಸಿಗೆಯ ಸಮಯದಲ್ಲಿ ಕೆರೆ ಮತ್ತು ಹಳ್ಳಗಳು ತುಂಬಿಸುವ ಯೋಜನೆ ರೂಪಿಸಬೇಕು ನೀರಿಲ್ಲದೆ ಪ್ರಾಣಿ, ಪಕ್ಷಿಗಳು ಸಾವು ನೋಡುವ ಪರಿಸ್ಥಿತಿ ಎದುರಾಗಿದೆ. ಚಡಚಣ ತಾಲೂಕಿನಲ್ಲಿ ನೀರಿನ ಅಭಾವ ಹೆಚ್ಚಾಗಿ ರೈತರು ಹೋರಾಟ ಮಾಡುವ ಅನಿವಾರ್ಯತೆ ಬಂದಿದೆ ಎಂದು ಗ್ರಾಮಸ್ಥರಾದ ಸಂದೀಪ್ ಬೆಳ್ಳಿ ಮಣಂಕಲಗಿ ತಿಳಿಸಿದರು.
ಸಾವನ್ನಪ್ಪಿದ ಜೀವಿಗಳ ವೈದಕೀಯ ಪರೀಕ್ಷೆ
ಈಗಾಗಲೇ ನಾವು ಸ್ಥಳೀಯರಿಂದ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಪಕ್ಷಿಗಳು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿರಬಹುದು. ಮೀನು ಮತ್ತು ಇತರೆ ಜೀವಿಗಳು ನೀರಿನ ಅಭಾವ ಉಂಟಾಗಿ ಸಾವನ್ನಪ್ಪಿದ್ದು, ಸಾವನ್ನಪ್ಪಿದ ಜೀವಿಗಳು ವೈದಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಂಗು ರಾಘನ್ನವರ, ಅರಣ್ಯಾಧಿಕಾರಿ ತಿಳಿಸಿದ್ದಾರೆ.
