ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಕುರ್ಚಿ ಕದನದ ನಡುವೆಯೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಅಚ್ಚರಿ ಹೇಳಿಕೆಯನ್ನು ಹೇಳಿದ್ದಾರೆ.
ಹೈಕಮಾಂಡ್ ತೀರ್ಮಾನ ಮಾಡುವವರಿಗೂ ನಾವು ಯಾವುದೇ ತೀರ್ಮಾನ ಮಾಡಲಾಗುವುದಿಲ್ಲ ಅಲ್ಲಿಯವರೆಗೂ ನಾನೇ ಸಿಎಂ ಆಗಿರುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಎಲ್ಲ ಶಾಸಕರೂ ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ. ಯಾರೇ ಮುಖ್ಯಮಂತ್ರಿ ಆದರೂ ನನಗೆ ಸಂತೋಷವೇ ಎಂದು ಹೇಳಿದರು.
ಹೈಕಮಾಂಡ್ ಎಷ್ಟು ಕಾಲ ಹೇಳುತ್ತದೋ ಅಷ್ಟರವರೆಗೆ ಖಾದರ್ ಅವರು ಸ್ಪೀಕರ್ ಆಗಿರುತ್ತಾರೆ. ವಿಪಕ್ಷಗಳು ಏನೇ ಪ್ರಯತ್ನ ಮಾಡಿದರೂ ಅವರಿಗೆ ಮನ್ನಣೆ ಸಿಗುವುದಿಲ್ಲ. ಅವರು ಸಚಿವರಾಗಿದ್ರೂ ನನಗೆ ಸಂತೋಷವೇ ಎಂದು ಹೇಳಿದರು.
ಇದಲ್ಲದೆ, ‘ಪ್ರತಿಯೊಬ್ಬರಿಗೂ ಕನಸುಗಳಿರುತ್ತವೆ. ಅಶೋಕ್ ಅವರಿಗೆ ಸಹ ಸಿಎಂ ಆಗುವ ಕನಸಿದೆ. ಆದರೆ ಅದಕ್ಕೆ ವಿಜಯೇಂದ್ರ ಅವಕಾಶ ನೀಡುವುದಿಲ್ಲ. ಅಶೋಕ್ ಸಿಎಂ ಆದರೂ ಸಂತೋಷ, ಬೆಲ್ಲದ್ ಆದರೂ ಸಂತೋಷ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಬೆಂಗಳೂರಿನ 5 ಪಾಲಿಕೆಗಳಿಗೆ ಪ್ರತ್ಯೇಕ ಬಜೆಟ್: ಡಿಕೆಶಿ
ಈ ವೇಳೆ ಶಾಸಕ ಸುನೀಲ್ ಕುಮಾರ್ ಮಾತನಾಡಿ, ‘ಡಿ.ಕೆ. ಶಿವಕುಮಾರ್ ಸಿಎಂ ಆದರೂ ಖುಷಿ’ ಎಂದು ಸವಾಲ್ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಹೈಕಮಾಂಡ್ ತೀರ್ಮಾನ ಮಾಡುವವರೆಗೂ ನಾನೇ ಸಿಎಂ. ನಮ್ಮಲ್ಲಿ ಯಾರೇ ಸಿಎಂ ಆದರೂ ಖುಷಿಯೇ ಎಂದು ಪುನಃ ಸ್ಪಷ್ಟಪಡಿಸಿದರು.
