ಬೆಂಗಳೂರು: ಎಲೆಕ್ಟ್ರಿಫಿಕೇಶನ್ ಮತ್ತು ಆಟೋಮೇಷನ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ, ಜಾಗತಿಕ ತಂತ್ರಜ್ಞಾನ ನಾಯಕನಾಗಿರುವ ABB ಸಂಸ್ಥೆಯು, ಬೆಂಗಳೂರಿನಲ್ಲಿ ಹೊಸ ‘ಗ್ರೀನ್ ಫೀಲ್ಡ್ ಕ್ಯಾಂಪಸ್’ಗಳು, ಉತ್ಪಾದನಾ ಘಟಕಗಳು, ಹೊಸ ಉತ್ಪನ್ನ ಶ್ರೇಣಿಗಳು ಹಾಗೂ ಸೇವಾ ಮತ್ತು ತರಬೇತಿ ಕೇಂದ್ರಗಳ ಮೂಲಕ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ. ಈ ವಿಸ್ತರಣೆಯ ಭಾಗವಾಗಿ ABB ಸಮೂಹದ ಸಿಇಓ ಮಾರ್ಟನ್ ವಿಯೆರೋಡ್ ಅವರು ಪೀಣ್ಯದಲ್ಲಿ ಹೊಸ ಸಮಗ್ರ ಮೋಷನ್ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅವರು ಕುಣಿಗಲ್ ರಸ್ತೆಯಲ್ಲಿರುವ ‘ಎಲೆಕ್ಟ್ರಿಫಿಕೇಷನ್ ಆಂಡ್ ಅಟೋಮೇಷನ್ ನೆಲಮಂಗಲ ಕ್ಯಾಂಪಸ್ 2’ ಅನ್ನು ಉದ್ಘಾಟಿಸಿದರು.
ಕರ್ನಾಟಕದಲ್ಲಿ ದೀರ್ಘಕಾಲದಿಂದ ಬಲವಾದ ಅಸ್ತಿತ್ವವನ್ನು ಹೊಂದಿರುವ ABB ಸಂಸ್ಥೆಗೆ ಬೆಂಗಳೂರು ಭಾರತದ ಪ್ರಮುಖ ಉತ್ಪಾದನಾ ಮತ್ತು ತಾಂತ್ರಿಕ ಕೇಂದ್ರವಾಗಿದೆ. ಈ ಇತ್ತೀಚಿನ ಹೂಡಿಕೆಯ ಮೂಲಕ ABB ರಾಜ್ಯದಲ್ಲಿ ಮೂರು ಪ್ರಮುಖ ಉತ್ಪಾದನಾ ಸ್ಥಳಗಳನ್ನು ಹೊಂದಲಿದ್ದು, ಇಲ್ಲಿನ ಉತ್ಪಾದನಾ ಚಟುವಟಿಕೆಗಳಲ್ಲಿ 3,000ಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯಲಿದ್ದಾರೆ. ಈ ಹೊಸ ಘಟಕಗಳು ಡೇಟಾ ಸೆಂಟರ್ ಗಳು, ಮೆಟ್ರೋ ರೈಲು, ನವೀಕರಿಸಬಹುದಾದ ಇಂಧನ, ಮೂಲಸೌಕರ್ಯ ಮತ್ತು ಲೋಹದಂತಹ ಕ್ಷೇತ್ರಗಳಿಗೆ ಸೇವೆ ಒದಗಿಸಲಿದೆ.
ಈ ಕುರಿತು ಮಾತನಾಡಿದ ABB ಇಂಡಿಯಾದ ಕಂಟ್ರಿ ಹೆಡ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಂಜೀವ್ ಶರ್ಮಾ ಅವರು, “ಈ ಕಾರ್ಯ ವಿಸ್ತರಣೆಯು ಭಾರತದ ಮೇಲೆ ABB ಹೊಂದಿರುವ ದೀರ್ಘಕಾಲೀನ ಬದ್ಧತೆ ಮತ್ತು ನಮ್ಮ ‘ಲೋಕಲ್- ಫಾರ್- ಲೋಕಲ್’ (ಸ್ಥಳೀಯರಿಗಾಗಿ ಸ್ಥಳೀಯ ಉತ್ಪಾದನೆ) ತಂತ್ರವನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕದಲ್ಲಿ ನಮ್ಮ ಉತ್ಪಾದನಾ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ, ನಾವು ಸುಧಾರಿತ ತಂತ್ರಜ್ಞಾನಗಳನ್ನು ಗ್ರಾಹಕರಿಗೆ ಹತ್ತಿರ ತರುತ್ತಿದ್ದೇವೆ. ಇದು ಕೈಗಾರಿಕೆಗಳ ಇಂಧನ ದಕ್ಷತೆಯನ್ನು ಸುಧಾರಿಸಲು, ಕಾರ್ಯಾಚರಣೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಭಾರತದ ಮೂಲಸೌಕರ್ಯ ಬೆಳವಣಿಗೆಗೆ ಬೆಂಬಲ ನೀಡಲು ನಮಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದರು.
