ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 5 ಮಂದಿ

ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 5 ಮಂದಿ

ಪುಣೆ: ಮಳೆಗಾಲ ಬಂತಂದರೆ ಸಾಕು ಪ್ರವಾಸಿಗರು ನದಿ, ಹಳ್ಳ-ಕೊಳ್ಳ ಇನ್ನಿತರ ಸ್ಥಳಗಳಿಗೆ ಹೋಗಿ ಮೋಜು ಮಸ್ತಿ ಮಾಡುತ್ತಾರೆ. ಆದರೆ ಪ್ರವಾಸಿಗರು ಮೋಜು ಮಸ್ತಿ ಮಾಡುವ ಮುನ್ನ ಎಚ್ಚರವಹಿಸಬೇಕು ಇಲ್ಲದಿದ್ದರೆ ತಮ್ಮ ಪ್ರಾಣಕ್ಕೆ ತಾವೇ ಕುತ್ತು ತಂದುಕೊಳ್ಳುತ್ತಾರೆ.

ಹೌದು, ಇದೀಗ ಎಲ್ಲಾ ಕಡೆಗೂ ಮಳೆ ಬರುತ್ತಿದ್ದು, ಇದರಿಂದ ಎಲ್ಲಾ ಹಳ್ಳ-ಕೊಳ್ಳಗಳು ತುಂಬಿ ತುಳುಕುತ್ತಿವೆ. ಇನ್ನು ಪ್ರವಾಸಿಗರು ಈ ಹಳ್ಳ-ಕೊಳ್ಳಗಳಲ್ಲಿ ಮೋಜು ಮಸ್ತಿ ಮಾಡಲು ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಅಂತಹದ್ದೇ ಒಂದು ಘಟನೆ  ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ನಿಸರ್ಗ ಸ್ವರ್ಗ ಅಂತ ಕರೆಯುವ ಲೋನಾವಾಲಾ ಜಲಪಾತ ಬಳಿ ಘೋರ ದುರಂತವೊಂದು ನಡೆದಿದೆ. ಪುಣೆಯ ವನ್ವಾಡಿ ಸಯ್ಯದ್ ನಗರದ ನಿವಾಸಿ ಅನ್ಸಾರಿ ಕುಟುಂಬ ಲೋನಾವಾಲಾ ಫಾಲ್ಸ್‌ ವೀಕ್ಷಣೆಗೆಂದು ತೆರಳಿತ್ತು. ರವಿವಾರ (ಜೂ.30) ರಂದು ಮಧ್ಯಾಹ್ನ ಭೂಷಿ ಅಣೆಕಟ್ಟಿನ ಸಮೀಪವಿರುವ ಜಲಪಾತದ ಬಳಿ ಆಟವಾಡುತ್ತಿದ್ದರು. ಅದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 9 ಮಂದಿ ಜಲಪಾತ ಮಧ್ಯದಲ್ಲಿ ಕುಳಿತ್ತಿದ್ದರು. ಇದನ್ನೂ ಓದಿ: ಇಂದಿನಿಂದ ಹೊಸ ಕ್ರಿಮಿನಲ್ ಕಾನೂನು ಜಾರಿ

ಪುಣೆಯ ಲೋನಾವಾಲಾ ಪ್ರದೇಶದ ಸುತ್ತಮುತ್ತ ಭಾರಿ ಮಳೆಯಾಗಿದೆ. ಇದರಿಂದ ಭೂಷಿ ಡ್ಯಾಂನಿಂದ ಏಕಾಏಕಿ ಹೆಚ್ಚಿನ ನೀರು ಧುಮ್ಮಿಕ್ಕುತ್ತಾ ಹರಿದು ಬಂದಿದೆ. ಅಷ್ಟೋತ್ತಿಗೆ 9 ಮಂದಿ ಪೈಕಿ 4 ಜನ ದಡ ಸೇರಿದ್ದರು. ಆದರೆ, ಜಲಪಾತದ ಮಧ್ಯದಲ್ಲಿದ್ದ 5 ಜನ ದಡಕ್ಕೆ ಬರಲಾಗದೆ ನೀರಿನ ಸೆಳೆತಕ್ಕೆ ಸಿಲುಕಿದ್ದರು. ಎಲ್ಲರ ಕಣ್ಣೆದುರೇ ಕೊಚ್ಚಿ ಹೋಗಿದ್ದು, ದಡದಲ್ಲಿದ್ದ ಹೆತ್ತವರು ರಕ್ಷಿಸಿ ರಕ್ಷಿಸಿ ಎಂದು ಚೀರಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇನ್ನು ಜಲಪಾತದಲ್ಲಿ ಕೊಚ್ಚಿಹೋದ ಶಾಹಿಸ್ತಾ ಅನ್ಸಾರಿ, ಅಮಿಮಾ ಅನ್ಸಾರಿ ಮತ್ತು ಉಮೇರಾ ಅನ್ಸಾರಿ ಈ ಮೂವರ ಮೃತದೇಹಗಳು ಸಿಕ್ಕಿವೆ. ಇನ್ನೂ 9 ವರ್ಷದ ಮರಿಯಾ ಸೈಯದ್ ಹಾಗೂ 4 ವರ್ಷದ ಅದ್ನಾನ್ ಅನ್ಸಾರಿ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

ಒಟ್ಟಾರೆಯಾಗಿ ಮಳೆಗಾಲದಲ್ಲಿ ಹಳ್ಳಕೊಳ್ಳ ಮತ್ತು ಫಾಲ್ಸ್ ಗಳಲ್ಲಿ ಎಚ್ಚರಿಕೆ ವಹಿಸದೆ ಹೋದರೆ ಪ್ರಾಣ ತಮ್ಮ ಪಕ್ಷಿಗಳು ಹಾರಿ ಹೋಗುವುದಂತೂ ಗ್ಯಾರಂಟಿ. ಆದ್ದರಿಂದ ಪ್ರವಾಸಿಗರು ಮಳೆಗಾಲದಲ್ಲಿ ಹಳ್ಳಕೊಳ್ಳಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು ಇಲ್ಲದಿದ್ದರೆ ತಮ್ಮ ಪ್ರಾಣಕ್ಕೆ ತಾವೇ ಆ ಆಪತ್ತು ತಂದುಕೊಳ್ಳುವುದಕ್ಕೆ ಇದೊಂದು ಉದಾಹರಣೆಯಾಗಿದೆ.

Related