ಶಹಾಪುರ: ತಾಲೂಕಿನ ಗೋಗಿ ಕೆನಲ್ ಹತ್ತಿರ ಬೋರುಕ ವಿದ್ಯುತ್ ಕಂಪನಿ ಬಳಿ ಗಂಡು ಚಿರತೆ ಮೃತ ದೇಹ ಪತ್ತೆಯಾಗಿದ್ದು, ಚಿರತೆಯ ಶವವನ್ನು ಮರಣೋತ್ತರ ಪರೀಕ್ಷೆ ಮಾಡಿ ಸ್ಯಾಂಪಲ್ ಸಂಗ್ರಹಿಸಿ ಎಫ್ಎಸ್ಎಲ್ ಗೆ ರವಾನಿಸಲಾಯಿತು.
ಘಟನೆ ವಿವರ:
ಗುರುವಾರ ಬೆಳಿಗ್ಗೆ 6: 30ರ ಸುಮಾರಿಗೆ ಬೋರುಕ ಕಂಪನಿಯಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಫಿಲ್ಟರ್ ನೀರಿನ ಹತ್ತಿರ ಚಿರತೆ ಶವ ಕಂಡು ಅಲ್ಲಿನ ಸಿಬ್ಬಂದಿಗಳು ಅರಣ್ಯಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಮೃತದೇಹವನ್ನು ಅರಣ್ಯ ಸಿಬ್ಬಂದಿ ಹೊರತೆಗೆದಿದ್ದು, ಪಶು ವೈದ್ಯರಿಂದ ಚಿರತೆಯ ಮರಣೋತ್ತರ ಪರೀಕ್ಷೆ ಮಾಡಿ, ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಬಳಿಕ ಜೆಎಂಎಫ್ಸಿ ನ್ಯಾಯಾಲಯಕ್ಕೆ ತೆರಳಿ ಅಧಿಕಾರಿಗಳು ನ್ಯಾಯಾಧೀಶರಿಂದ ಅನುಮತಿ ಪಡೆದು ಚಿರತೆಯನ್ನು ಸುಟ್ಟು ಹಾಕಲಾಯಿತು.
ನೀರಿಗೆ ಉಸಿರುಗಟ್ಟಿ ಒದ್ದಾಡಿ ಚಿರತೆ ಮೃತ:
ಪಶು ಸಂಗೋಪನೆ ಅಧಿಕಾರಿಗಳ ಮಾಹಿತಿ ಪ್ರಕಾರ ಚಿರತೆಯು ನೀರಿನಲ್ಲಿ ಬಿದ್ದಿದ್ದು ಹೆಚ್ಚಿನ ನೀರು ಹೊಟ್ಟೆ ಒಳಗೆ ಸೇರಿದ್ದು. ಒದ್ದಾಡಿ ಹುಲಿ ಮೃತಪಟ್ಟಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಎಫ್ಎಸ್ಎಲ್ ವರದಿಯ ಬಳಿಕವೇ ಸತ್ಯತೆ ತಿಳಿಯಲಿದೆ.
ಜನರ ನಿದ್ದೆಗೆಡಿಸಿದ ಚಿರತೆ
ಬೋರುಕ ಕಂಪನಿಯ ಸಿಬ್ಬಂದಿಯೋಬ್ಬರು ಮೂರು ದಿನಗಳ ಹಿಂದೆ ಕರ್ಕಶ ಶಬ್ದ ಕೇಳಿ ಅನುಮಾನ ವ್ಯಕ್ತಪಡಿಸಿದ್ದರು. ಮತ್ತು ತಡರಾತ್ರಿಯವರೆಗೂ ಇದೇ ವಿಷಯ ಊರಿನಲ್ಲಿ ಬಹು ಚರ್ಚೆಗೆ ಗ್ರಾಸವಾಯಿತು. ಇದೀಗ ಚಿರತೆ ಶವ ಪತ್ತೆಯಾಗಿದ್ದು ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದ್ದು, ಭಯಭೀತರಾಗಿದ್ದಾರೆ. ಚಿರತೆಯ ಶವ ಪತ್ತೆಯಾಗುತ್ತಿದ್ದಂತೆ ಇನ್ನೂ ಒಂದಷ್ಟು ಚಿರತೆಗಳು ಇರಬಹುದು ಎಂಬ ಅನುಮಾನ ಜನರ ನಿದ್ದೆಗೆಡಿಸಿದೆ.
ಈ ವೇಳೆ ಡಿಸಿಎಫ್ ಎ.ಬಿ ಪಾಟೀಲ್, ಎಸಿಎಫ್ ಸುನಿಲ್ ಚೌವ್ಹಾನ, ಆರ್ ಎಫ್ ಭಾಗಣ್ಣಗೌಡ, ಪಶುಸಂಗೋಪನೆ ತಾಲೂಕ ಅಧಿಕಾರಿ ಡಾ. ಅಣ್ಣಾರಾವ್ ಪಾಟೀಲ್, ಉಪ ವಲಯ ಅರಣ್ಯ ಅಧಿಕಾರಿ ಕಾಶಪ್ಪ ಸೇರಿದಂತೆ ಅರಣ್ಯ, ಪಶುಸಂಗೋಪ ಇಲಾಖೆ ಅಧಿಕಾರಿಗಳು ಇದ್ದರು.
