ದಾವಣಗೆರೆ: ಲಂಬಾಣಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ದಾವಣಗೆರೆ ಜಿಲ್ಲೆಯ ನ್ಯಾಮಿತಿ ತಾಲ್ಲೂಕಿನ ಭಾಯಗಡ್–ಸೊರಗೊಂಡನಕೊಪ್ಪ ಗ್ರಾಮದಲ್ಲಿ ಶನಿವಾರ ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಬೆಂಗಳೂರು ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ (ರಿ) ಭಾಯಾಗಡ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಅವರ 287ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ದಯೆ, ಧರ್ಮ ಮತ್ತು ಸಮಾನತೆಯ ಮೌಲ್ಯಗಳು ಬಲವಾಗಬೇಕು ಎಂದು ಹೇಳಿದ ಅವರು, ಜಗಜ್ಯೋತಿ ಬಸವಣ್ಣ ಅವರ “ದಯವಿಲ್ಲದ ಧರ್ಮವಾವುದಯ್ಯಾ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ” ಎಂಬ ವಚನವನ್ನು ಉಲ್ಲೇಖಿಸಿದರು. ಇದೇ ವೇಳೆ ಸಂವಿಧಾನ ಶಿಲ್ಪಿ ಅಂಬೇಡ್ಕರ್” ಅವರ “ಇತಿಹಾಸ ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು” ಎಂಬ ಮಾತನ್ನೂ ಸ್ಮರಿಸಿದರು.
ಲಂಬಾಣಿ ಸಮುದಾಯದ ಪರವಾಗಿ ತಾವು ಸದಾ ಹೋರಾಟ ನಡೆಸಿದ್ದಾಗಿ ತಿಳಿಸಿದ ಅವರು, ಹೋರಾಟ ಸಂದರ್ಭೋಚಿತವಾಗಿರಬೇಕು ಎಂದರು. ಧಾರ್ಮಿಕ ವೇದಿಕೆಯಲ್ಲಿ ಸಂಘರ್ಷಕ್ಕಿಂತ ಸಮಾಜದ ಏಕತೆ ಮತ್ತು ಅಭಿವೃದ್ಧಿ ಮುಖ್ಯವೆಂದು ಅಭಿಪ್ರಾಯಪಟ್ಟರು.
ಲಂಬಾಣಿ ಸಮುದಾಯದ ಬದುಕಿಗೆ ಹೊಸ ದಿಕ್ಕು ನೀಡುವ ವಿವಿಧ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದು, ಅದರ ಪ್ರಯೋಜನ ಸಮುದಾಯಕ್ಕೆ ದೊರಕುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಬೋಸರಾಜು, ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ, ಸಂಸದರಾದ ಪ್ರಭಾ ಮಲ್ಲಿಕಾರ್ಜುನ, ಬಿ.ವೈ. ರಾಘವೇಂದ್ರ, ಕೆಟಿಡಿಸಿಎಲ್ ಚೇರ್ಮನ್ ಎನ್. ಜಯದೇವ ನಾಯ್ಕ, ರೇಣುಕಾಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
