ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿರುವ “17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ”ದ ಉದ್ಘಾಟನಾ ಸಮಾರಂಭವನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕಾರಣ ವಿವರಿಸಿದ ಸಿಎಂ, “ಪ್ರಕಾಶ್ ರಾಜ್ ಅವರು ಕೇವಲ ಸಿನಿಮಾಗೆ ಸೀಮಿತರಾಗಿಲ್ಲ. ಅವರು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಅದಕ್ಕಾಗಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ” ಎಂದು ಹೇಳಿದರು.
ಈ ಬಾರಿ ಚಲನಚಿತ್ರೋತ್ಸವಕ್ಕೆ ‘ಸ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್ ಆಯ್ಕೆ ಮಾಡಲಾಗಿದೆ. ಸಿನಿಮಾ ಕೇವಲ ಮನರಂಜನೆಗೆ ಸೀಮಿತವಾಗಬಾರದು, ಸಮಾಜದಲ್ಲಿರುವ ಅಸಮಾನತೆ, ಅಂಕುಡೊಂಕುಗಳನ್ನು ತಿದ್ದುವ ಕೆಲಸವೂ ಸಿನಿಮಾಗಳಿಂದ ಆಗಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಅಸಮಾನತೆ, ಬಡತನ ಇನ್ನೂ ಜೀವಂತವಾಗಿದ್ದು, ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ವಾಸ್ತವ ಸ್ಥಿತಿಯನ್ನು ಸಿನಿಮಾಗಳು ಜಗತ್ತಿನ ಮುಂದೆ ಇಡಬೇಕು ಎಂದರು. ಈ ಕೆಲಸವನ್ನು ಡಾ. ರಾಜ್ಕುಮಾರ್ ಅವರ ಸಿನಿಮಾಗಳು ಯಶಸ್ವಿಯಾಗಿ ಮಾಡಿದ್ದ ಉದಾಹರಣೆಯನ್ನು ಅವರು ನೆನಪಿಸಿದರು. ಇದನ್ನೂ ಓದಿ: ದಾಖಲೆ ಅಥವಾ ಸಾಕ್ಷ್ಯವಿಲ್ಲದೆ ಆರೋಪ ಮಾಡುವುದು ಸರಿಯಲ್ಲ: ಬೈರತಿ ಸುರೇಶ್
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಮೂಲಕ ಬೇರೆ ದೇಶಗಳ ಜನಜೀವನ, ರಾಜಕೀಯ, ಸಮಾಜ ಹಾಗೂ ಮಹಿಳೆ-ಪುರುಷರ ಸ್ಥಿತಿಗತಿಯನ್ನು ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತದೆ ಎಂದ ಸಿಎಂ, ಈ ಅವಕಾಶವನ್ನು ಸಮಾಜ ಬದಲಾವಣೆಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
