ಗದಗ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿರುವ ಯೋಜನೆಗಳಿಂದ ನಮ್ಮ ದೇಶದಲ್ಲಿ ಬಡವರು ಸ್ವಾಭಿಮಾನದಿಂದ ಬದುಕುವ ಕೆಲಸ ಆಗಿದೆ. ಇದರ ಪರಿಣಾಮ ಪ್ರತಿಯೊಬ್ಬ ಭಾರತೀಯನಿಗೆ ಹಣ ಗಳಿಸುವ ಮತ್ತು ಖರ್ಚು ಮಾಡುವ ಶಕ್ತಿ ಬಂದಿದೆ. ಸರ್ಕಾರ ಶ್ರೀಮಂತ ಇದ್ದರೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಆದರೆ, ಜನರು ಶ್ರೀಮಂತ ಇದ್ದರೆ ಅವರ ಆರ್ಥಿಕತೆ ಬೆಳೆದರೆ ದೇಶದ ಆರ್ಥಿಕತೆ ಬೆಳೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ಅವರು ಗದಗ ಜಿಲ್ಲೆಯ ಗಜೇಂದಗಡದ ದಿ. ಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿ. ನ ಮಹಿಳಾ ಸಬಲೀಕರಣ ಸಾಲ ವಿತರಣೆ ಹಾಗೂ ಗ್ರಾಹಕರ ಸಮಾವೇಶ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ಬಂದ ನಂತರ ಸ್ಥಳೀಯ ಸರ್ಕಾರಗಳು ಅಂದರೆ ನಮ್ಮನ್ನು ನಾವೇ ಆಳಿಕೊಳ್ಳುವುದು ಅಂತ ಇದ್ದವು. ಅವರು ಸ್ಥಳೀಯವಾಗಿ ಊರಿನ ಅಭಿವೃದ್ಧಿ, ಜನರ ನಡುವೆ ಸುಸಂಸ್ಕೃತ ವಾತಾವರಣ, ಊರಿನ ಆರ್ಥಿಕತೆ ಬೆಳೆಸುವುದು, ಈಗ ಊರಿನ ಆರ್ಥಿಕತೆ ಅಂದರೆ ಹಣಕಾಸಿನ ಸಂಸ್ಥೆ ಬೇರೆ ನಾವು ಬೇರೆ ಅಂತ ಅಂದುಕೊಳ್ಳುತ್ತೇವೆ. ನಮ್ಮೂರಿಗೆ ಕರ್ನಾಟಕ ಬ್ಯಾಂಕ್ ಕೊಡಿ, ಮಲಪ್ರಭಾ ಬ್ಯಾಂಕ್ ಕೊಡಿ ಅಂತ ಬೇಡಿಕೆ ಬರುತ್ತವೆ.
ನಾವು ಇನ್ನೊಬ್ಬರ ಬ್ಯಾಂಕಿನ ಮುಂದೆ ಹೋಗಿ ಕೈ ಚಾಚುವ ಬದಲು ನಾವೇ ಮಾಲಕರಾಗುವುದು ನಿಮ್ಮ ಶಕ್ತಿ ಎಷ್ಟು ದೊಡ್ಡದಿದೆ ಎನ್ನುವುದು ತೋರಿಸುತ್ತವೆ. ಭಾರತ ದೇಶ ಬಹಳ ಬಲಿಷ್ಠವಾಗಿ ಆರ್ಥಿಕವಾಗಿ ಬೆಳೆಯುವ ದೇಶ. ಕೊವಿಡ್ ಸಂದರ್ಭದಲ್ಲಿ ಅಮೇರಿಕ ಅನ್ನುವ ದೊಡ್ಡ ದೇಶ ನೆಲಕಚ್ಚಿತ್ತು. ಅಮೇರಿಕ ಈಗ ಶೇ 2 ರಷ್ಟು ಬೆಳವಣಿಗೆ ಆಗುತ್ತಿದೆ. ಜಪಾನ್ ಶೇ 4. ಚೀನಾ ಶೇ 3 ರಷ್ಟು ಬೆಳವಣಿಗೆ ಆಗುತ್ತಿದೆ. ಆದರೆ, ಭಾರತ ಮಾತ್ರ ಶೇ 7.5 ರಷ್ಟು ಬೆಳವಣಿಗೆ ಆಗುತ್ತಿದೆ. ಇದರಲ್ಲಿ ಸರ್ಕಾರದ ನೀತಿ, ಕಾರ್ಮಿಕರ, ರೈತರ ಶ್ರಮ ಉದ್ಯಮಿಗಳ ಪರಿಶ್ರಮ ಶಿಕ್ಷಣ ಮತ್ತು ಉದ್ಯೋಗ ಹೆಚ್ಚಳ ಆಗಿರುವುದು ಕಾರಣ ಎಂದು ಹೇಳಿದರು.
ಮೋದಿಯವರು ಪಧಾನಿ ಆದ ನಂತರ ಅವರು ಮಾಡಿರುವ ಯೋಜನೆಗಳಿಂದ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಇಂತ ಸಾಧನೆ ಯಾವುದೇ ದೇಶದಲ್ಲಿ ಆಗಿಲ್ಲ. ಬಡತನಕ್ಕಿಂತ ಮೇಲೆ ಬರುವುದು ಅಂದರೆ, ಕೈಗೆ ಕೆಲಸ, ನೀರು, ಗ್ಯಾಸ್ ಸಿಕ್ಕಿದೆ. ಬಡವ ಸ್ವಾಭಿಮಾನದಿಂದ ಬದುಕುವ ಕೆಲಸ ನಮ್ಮ ದೇಶದಲ್ಲಿ ಆಗಿದೆ. ಇದರ ಪರಿಣಾಮ ಪ್ರತಿಯೊಬ್ಬ ಭಾರತೀಯನಿಗೆ ಹಣ ಗಳಿಸುವ ಮತ್ತು ಖರ್ಚು ಮಾಡುವ ಶಕ್ತಿ ಬಂದಿದೆ. ಸರ್ಕಾರ ಶ್ರೀಮಂತ ಇದ್ದರೆ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಿಲ್ಲ. ಆದರೆ, ಜನರು ಶ್ರೀಮಂತ ಇದ್ದರೆ ಅವರ ಆರ್ಥಿಕತೆ ಬೆಳೆದರೆ ದೇಶದ ಆರ್ಥಿಕತೆ ಬೆಳೆಯುತ್ತದೆ. ಜನರ ಕೈಯಲ್ಲಿ ಹಣ ಇದ್ದರೆ ದೇಶ ಬೆಳೆಯುತ್ತದೆ ಎಂದು ಹೇಳಿದರು.
ಉಳಿತಾಯ ಸಂಸ್ಕೃತಿ
ಅಮೇರಿಕದ ಬ್ಯಾಂಕ್‌ಗಳು ಮತ್ತು ನಮ್ಮ ಹಳ್ಳಿಯ ಸಾಸಿವೆ ಜೀರಿಗೆ ಡಬ್ಬಿಗಳ ಬಗ್ಗೆ ಒಂದು ಚರ್ಚೆಯಾಯಿತು. ನಮ್ಮ ತಾಯಂದಿರು ಅಪತ್ ಕಾಲದಲ್ಲಿ ಬರುತ್ತದೆ ಎಂದು ಹಣವನ್ನು ಸಾಸಿವೆ ಡಬ್ಬಿಯಲ್ಲಿ ಇಡುತ್ತಾರೆ. ನಮ್ಮಲ್ಲಿ ಉಳಿತಾಯ ಮಾಡುವ ಸಂಸ್ಕೃತಿ ಇದೆ. ವಿದೇಶದಲ್ಲಿ ಖರ್ಚು ಮಾಡುವ ಸಂಸ್ಕೃತಿ ಇದೆ. ಉಳಿತಾಯ ಮಾಡುವ ಸಂಸ್ಕೃತಿಯೇ ನಮ್ಮ ದೇಶಕ್ಕೆ ಕಷ್ಟ ಕಾಲದಲ್ಲಿ ಸಹಾಯ ಆಗುತ್ತದೆ. ದುಡಿಮೆಯಿಂದ ಶ್ರೀಮಂತರಾಗಲು ಸಾಧ್ಯ. ದುಡಿಮೆ ಇಲ್ಲದೇ ಏನೂ ಆಗಲು ಸಾಧ್ಯವಿಲ್ಲ. ನಿಮ್ಮ ಶ್ರಮದ ಫಲ ನಿಮಗೂ ಸಿಗಬೇಕು, ಅದರ ಫಲ ಸಂಸ್ಥೆಗೂ ಸಿಗಬೇಕು. ಬ್ಯಾಂಕ್ ನವರು 50 ಸಾವಿರ ರೂ. ಸಾಲ ಕೊಡುತ್ತಾರೆ. ಅದನ್ನು ಸರಿಯಾಗಿ ತುಂಬಿದರೆ 2 ಲಕ್ಷ ಕೊಡುತ್ತಾರೆ. ದಾರಿದ್ರ್ಯ ಹೋಗಬೇಕೆಂದರೆ ದುಡಿಮೆ ಮಾಡಬೇಕು. ಒಂದು ಕಾಲದಲ್ಲಿ ದುಡ್ಡೆ ದೊಡ್ಡಪ್ಪ ಅಂತ ಮಾತಿತ್ತು. ಈಗ ದುಡಿಮೆಯೇ ದೊಡ್ಡಪ್ಪ, ಯಾರಿಗೆ ಅವಶ್ಯಕತೆ ಇದೆ. ಅವರಿಗೆ ಕೊಟ್ಟರೆ ಅದು ಬೆಳೆಯುತ್ತದೆ. ಇಲ್ಲಿ ಸಾಮಾನ್ಯ ತಾಯಂದಿರಿಗೆ ಸಾಲ ಕೊಟ್ಟಿದ್ದೀರಿ ಅವರು ದುಡಿಮೆ ಮಾಡುತ್ತಾರೆ. ನಿಮ್ಮ ದುಡ್ಡು ದುಡಿಯುತ್ತದೆ. ಬಾಂಗ್ಲಾದಲ್ಲಿ ಭಿಕುಕರಿಗೆ ಸಾಲ ಕೊಡುತ್ತಾರೆ. ಬ್ಯಾಂಕ್ ನವರು ಭಿಕ್ಷುಕರಿಗೆ ನಾವು ಹತ್ತು ಸಾವಿರ ಸಾಲ ಕೊಡುತ್ತೇವೆ. ಇದನ್ನೂ ಓದಿ: ಜ. 12ಕ್ಕೆ ಕಲಬುರಗಿ ಜಿಲ್ಲೆಗೆ ಸಿಎಂ ಭೇಟಿ
ಅದರಲ್ಲಿ ಸಾಮಾನುಗಳನ್ನು ಖರೀದಿಸಿ ಭಿಕ್ಷೆ ಬೇಡುವ ಮನೆಗೆ ಹೋಗಿ ಮಾರಾಟ ಮಾಡಿ ಅಂತ ಹೇಳಿದರು. ಅದರಿಂದ ಒಂದೇ ವರ್ಷದಲ್ಲಿ 11 ಸಾವಿರ ಜನರು ಭಿಕ್ಷಾಟನೆಯಿಂದ ಹೊರ ಬಂದರು. ಅವರು ಅಂತಾರಾಷ್ಟ್ರೀಯ ಕಂಪನಿಯ ಮಾರಾಟಗಾರರಾದರು. ದುಡಿಮೆ ಇರುವ ಸಮಾಜ ಎಂದೂ ಬಡವಾಗುವುದಿಲ್ಲ. ದುಡಿಯದ ಸಮಾಜ ಎಂದು ಉದ್ಧಾರ ಆಗುವುದಿಲ್ಲ. ಈ ದೇಶದ ಆರ್ಥಿಕತೆ ಬೆಳೆಯಲು ರೈತ ಮತ್ತು ಕಾರ್ಮಿಕ ಕಾರಣ. ಶೇ 1 ರಷ್ಟು ಕೃಷಿ ಅಭಿವೃದ್ಧಿಯಾದರೆ ಶೇ 4 ರಷ್ಟು ಕೈಗಾರಿಕೆಯಲ್ಲಿ ಅಭಿವೃದ್ಧಿಯಾಗುತ್ತದೆ. ಸೇವಾ ವಲಯದಲ್ಲಿ ಶೇ 10 ರಷ್ಟು ಅಭಿವೃದ್ಧಿಯಾಗುತ್ತದೆ. ಸ್ಥಳೀಯವಾಗಿ ತಾಯಂದಿರಿಗೆ ಮತ್ತು ಯುವಕರಿಗೆ ಅವಕಾಶ ಕೊಡುವ ಕೆಲಸ ಬ್ಯಾಂಕ್‌ಗಳು ಮಾಡಬೇಕು. ತಾಯಂದಿರಿಗೆ ಸಾಲ ಕೊಟ್ಟರೆ ಶೇ 100 ರಷ್ಟು ಹಣ ವಾಪಸ್ ಬರುತ್ತದೆ.
ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿರುವ ಸಾಲ 99 ರಷ್ಟು ಬಂದಿದೆ. ಪ್ರಧಾನ ಮಂತ್ರಿ ಯೋಜನೆಯಿಂದ ಬೀದಿ ವ್ಯಾಫಾರಿಗಳಿಗೆ 65 ಸಾವಿರ ಜನರಿಗೆ 33 ಕೋಟಿ ರೂ. ಸಾಲ ಕೊಟ್ಟಿದ್ದಾರೆ. ವ್ಯಾಪಾರ ಮಾಡುವ ಛಲ ಇದ್ದರೆ ಅವಕಾಶಗಳು ಸಿಗುತ್ತವೆ. ಈ ಸಂಸ್ಥೆ ನೂರು ವರ್ಷ ಎಲ್ಲವನ್ನು ಸಹಿಸಿಕೊಂಡು ಬಂದಿದೆ. ಇನ್ನೂ.. ನೂರು ವರ್ಷ ಬೆಳೆಯುತ್ತದೆ. ವಿಸ್ತರಣೆ ಮಾಡಿ ಒಳ್ಳೆಯ ವ್ಯಾಪಾರ ಮಾಡಿ ಷೇರುದಾರರಿಗೆ ಅನುಕೂಲವಾಗಬೇಕು. ಬ್ಯಾಂಕಿನಲ್ಲಿ ಡಿಫಾಸಿಟ್ ಇಟ್ಟರೆ ಶೇ 10ರಷ್ಟು ಬಡ್ಡಿ, ಷೇರು ಇಟ್ಟರೆ ಶೇ 12 ರಷ್ಟು ಕೊಡುತ್ತೇವೆ ಎಂದು ಬ್ಯಾಂಕ್ ಅಧ್ಯಕ್ಷರು ಹೇಳಿದ್ದಾರೆ. ಎಲ್ಲ ಬ್ಯಾಂಕುಗಳಲ್ಲಿ ಆ ರೀತಿ ಕೊಡುವುದಿಲ್ಲ. ಗಜೇಂದಗಡದ ಅಭಿವೃದ್ಧಿಯಲ್ಲಿ ಬ್ಯಾಂಕಿನ ಪಾತ್ರ ಬಹಳ ಇದೆ. ವಿಶ್ವಾಸವೇ ಬಂಡವಾಳ, ಅದನ್ನು ಸದುಪಯೋಗ ಮಾಡಿಕೊಳ್ಳಿ ಎಂದು ಹೇಳಿದರು.
