ಕಲಬುರಗಿ: ಸಿಎಂ ಸಿದ್ದರಾಮಯ್ಯ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಹಾಗೂ ಸೇಡಂ ಮತಕ್ಷೇತ್ರದ ಯಡ್ರಾಮಿ ಹಾಗೂ ಸೇಡಂ ಪಟ್ಟಣಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಉದ್ಘಾಟನೆ ಮಾಡಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು
ನಗರದ ಐವಾನ್ ಇ ಶಾಹಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಜನೆವರಿ 12 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮೊದಲು ಜೇವರ್ಗಿ ಮತಕ್ಷೇತ್ರದ ಯಡ್ರಾಮಿಗೆ ಆಗಮಿಸಲಿದ್ದು, ₹ 867.49 ಕೋಟಿ ವೆಚ್ಚದ 83 ಅಭಿವೃದ್ದಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 38.37 ಕೋಟಿ ವೆಚ್ಚದ 17 ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಖರ್ಗೆ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹೋರಾಟ: ಕೆಹೆಚ್. ಮುನಿಯಪ್ಪ
ಸೇಡಂ ಪಟ್ಟಣಕ್ಕೆ ಭೇಟಿ ನೀಡುವ ಸಿಎಂ,₹ 579.68 ಕೋಟಿ ವೆಚ್ಚದ 292 ಯೋಜನೆಗಳಿಗೆ ಅಡಿಗಲ್ಲು ಹಾಗೂ ₹ 110.35 ಕೋಟಿ ವೆಚ್ಚದಲ್ಲಿ ಈಗಾಗಲೇ ಕೈಗೆತ್ತಿಕೊಂಡು ಪೂರ್ಣಗೊಂಡ 76 ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಎರಡು ಕಡೆ ಒಟ್ಟು ₹ 1595.91 ಕೋಟಿ ವೆಚ್ಚದ 467 ಕಾಮಗಾರಿಗಳ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಹಾನಿಯಾದ ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಸಮೀಕ್ಷೇಯ ವರದಿಯಂತೆ ಒಟ್ಟು 3.24 ಲಕ್ಷ ಹೇಕ್ಟರ್ ಹಾನಿ ಪ್ರದೇಶದ ಕುರಿತು ಸರಕಾರಕ್ಕೆ, ಪರಿಹಾರ ಮಂಜೂರು ಮಾಡಲುಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು.
ಸದರಿ ಪ್ರಸ್ತಾವನೆಯಂತೆ ಈಗಾಗಲೇ ಪರಿಹಾರ ತಂತ್ರಂಶದಲ್ಲಿ ಅರ್ಹ ರೈತರ ಹಾಗೂ ಹಾನಿ ಪ್ರದೇಶದ ಮಾಹಿತಿಯನ್ನು ಅಳವಡಿಸಲಾಗಿದ್ದು, ಅದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 3,23,318 ರೈತರು ಪರಿಹಾರ ಪಡೆದ ಫಲಾನುಭವಿಗಳಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ SDRF ನಿಯಮಗಳ ಪ್ರಕಾರ ಪಾವತಿಸಲಾದ ಮೊತ್ತ ₹25,097.21 ಲಕ್ಷಗಳು.
ಕಲಬುರ್ಗಿ ಜಿಲ್ಲೆಗೆ ದೊರಕಿರುವ ರಾಜ್ಯ ಸರ್ಕಾರ ಘೋಷಿಸಿದ ಹೆಚ್ಚುವರಿ ಇನ್ ಪುಟ್ ಸಬ್ಸಿಡಿ (ಪ್ರತಿ ಹೆಕ್ಟೇರ್ ಗೆ ₹8,500 ರಂತೆ) ಪಾವತಿಸಲಾದ ಮೊತ್ತ ₹24,775.82 ಲಕ್ಷಗಳು. ಕಲಬುರಗಿ ಜಿಲ್ಲೆಗೆ ಈಗಾಗಲೇ ವಿತರಿಸಲಾಗಿರುವ ಪರಿಹಾರ ಒಟ್ಟು ಮೊತ್ತ ₹49,873.03 ಲಕ್ಷಗಳು ಎಂದು ಸಚಿವರು ವಿವರಿಸಿದರು.
