ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಪವಿತ್ರ ಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಇಂದು ನಡೆದ ವಿಚಾರಣೆಯಲ್ಲಿ ಪ್ರಮುಖವಾಗಿ ರೇಣುಕಾ ಸ್ವಾಮಿಯನ್ನು ಅಪಹರಿಸಿದ ಕುರಿತಾಗಿ ನ್ಯಾಯಾಲಯದಲ್ಲಿ ಜಡ್ಜ್ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಡಿ ಗ್ಯಾಂಗ್ ನಮ್ಮ ಮೇಲೆ ಕೊಲೆ ಆರೋಪ ಇರುವುದು ಸುಳ್ಳು ಎಂದು ಕೋರ್ಟ್ ಮುಂದೆ ಹೇಳಿದ್ದಾರೆ.
ಹೌದು, ಎಲ್ಲಾ 17 ಆರೋಪಿಗಳ ವಿರುದ್ಧ ಇಂದು ಸೆಷನ್ಸ್ ಕೋರ್ಟ್ನಲ್ಲಿ ಆರೋಪ ನಿಗದಿ ಮಾಡಲಾಯಿತು. ಈ ವೇಳೆ ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ನಾವು ಹತ್ಯೆ ಮಾಡಿಲ್ಲ ಎಂದು ಆರೋಪಿಗಳು ಹೇಳಿದ್ದಾರೆ.
ಪೊಲೀಸರು ಸಲ್ಲಿಸಿದ್ದ ದೋಷಾರೋಪವನ್ನು ನ್ಯಾಯಾಲಯದಲ್ಲಿ ನಿಧಾನವಾಗಿ ಸ್ಪಷ್ಟವಾಗಿ ಓದತೊಡಗಿದರು. ಈ ವೇಳೆ ಎಲ್ಲರಿಗೂ ಕೇಳುತ್ತಿದೆ ಅಲ್ಲವೇ ಎಂದು ಪ್ರಶ್ನಿಸಿದರು. ಒಂದು ವೇಳೆ ಕೇಳದೇ ಇದ್ದರೆ ಮತ್ತೆ ಕೇಳಿ ಎಂದು ಜಡ್ಜ್ ಸೂಚಿಸಿದರು.
ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯನ್ನು ಹತ್ಯೆ ಮಾಡಿದ್ದೀರಿ. ಬಹಳ ಪ್ಲ್ಯಾನ್ ಮಾಡಿ ರೇಣುಕಾಸ್ವಾಮಿಯನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ ಎಂದು ಚಾರ್ಚ್ಶೀಟ್ನಲ್ಲಿ ಉಲ್ಲೇಖವಾಗಿರುವ ಘಟನಾವಳಿಯ ಒಂದೊಂದೇ ಪ್ರಮುಖ ವಿಚಾರವನ್ನು ಓದಿದರು. ಇದನ್ನೂ ಓದಿ: ಇಂದಾದ್ರೂ ನಿರ್ಧಾರವಾಗುತ್ತಾ ದರ್ಶನ್ ಭವಿಷ್ಯ?
ದೋಷರೋಪವನ್ನು ಓದಿದ ಬಳಿಕ, ನಮ್ಮ ಮೇಲಿನ ಆರೋಪಗಳು ಸುಳ್ಳು. ನಾವು ಕೊಲೆಗಡುಕರಲ್ಲ ಎಂದು ಕೊಲೆ ಆರೋಪಿಗಳು ತಮ್ಮ ಮೇಲೆ ಬಂದಿರುವ ದೋಷಾರೋಪವನ್ನು ನಿರಾಕರಿಸಿದರು. ಈ ವೇಳೆ ನಮ್ಮ ವಕೀಲರನ್ನು ನಾವು ಬದಲಾಯಿಸಬೇಕಿದೆ. ಹೀಗಾಗಿ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಆರೋಪ ನಿಗದಿ ಮಾಡಿದ ನಂತರ ಕೋರ್ಟ್ ಮುಂದಿನ ವಿಚಾರಣೆಯನ್ನು ನ.10ಕ್ಕೆ ಮುಂದೂಡಿ ವಿಚಾರಣೆಗೆ ಆದೇಶಿಸಿತು.
