ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೂ ಇಂದು (ಸೋಮವಾರ ನ.03) ಮಹತ್ವದ ದಿನವಾಗಿದ್ದು ಕೋರ್ಟ್ ಇಂದು ಎಲ್ಲರ ಮೇಲಿನ ದೋಷಾರೋಪ ನಿಗದಿಪಡಿಸಲಿದೆ.
ಹೌದು, ಕಳೆದ ವಾರ ದರ್ಶನ್ ಹಾಗೂ ಇತರ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ವಿಚಾರಣೆ ಮುಗಿದು, ದೋಷಾರೋಪ ನಿಗದಿಯನ್ನು ಮುಂದೂಡಲಾಗಿತ್ತು. ಈ ಬಾರಿ ನ್ಯಾಯಾಧೀಶರು “ದೋಷಾರೋಪದ ದಿನ ಎಲ್ಲರೂ ಖುದ್ದು ಹಾಜರಿರಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರು.
ಇಂದು ಬೆಳಗ್ಗೆ ಕೋರ್ಟ್ ಮುಂದೆ ದರ್ಶನ್ ಸೇರಿದಂತೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಹಾಗೂ ಜಾಮೀನಿನ ಮೇಲೆ ಹೊರಗೆ ಇರುವ ಆರೋಪಿಗಳು ಎಲ್ಲರೂ ಹಾಜರಾಗಬೇಕಾಗಿದೆ. ಗೈರಾದರೆ ಪೊಲೀಸರು ಅರೆಸ್ಟ್ ಮಾಡುವಂತೆ ಕೋರ್ಟ್ ಎಚ್ಚರಿಕೆ ನೀಡಿದೆ. ಹೀಗಾಗಿ ಇಂದಿನ ವಿಚಾರಣೆ ರಾಜ್ಯದಷ್ಟೇ ಅಲ್ಲ, ಸಿನಿರಂಗದ ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ಶಿಕ್ಷಣ, ಪ್ರತಿಭೆ ಯಾರ ಸ್ವತ್ತೂ ಅಲ್ಲ: ಸಿಎಂ
ಸುಮಾರು ಒಂದೂವರೆ ವರ್ಷದ ಬಳಿಕ ಪ್ರಕರಣ ಇದೀಗ ನಿರ್ಣಾಯಕ ಹಂತ ತಲುಪಿದೆ. ಇಂದಿನ ವಿಚಾರಣೆಯಲ್ಲಿ ಪೊಲೀಸರು ಹೇರಿರುವ ಆರೋಪಗಳನ್ನು ಕೋರ್ಟ್ ಆರೋಪಿಗಳಿಗೆ ಓದಿ ಹೇಳಲಿದ್ದಾರೆ. ಬಳಿಕ ನ್ಯಾಯಾಧೀಶರು ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ? ಎಂದು ಪ್ರಶ್ನಿಸಲಿದ್ದಾರೆ.
ಆರೋಪಿಗಳು ಒಪ್ಪಿಕೊಂಡರೆ ತಕ್ಷಣ ಶಿಕ್ಷೆ ಘೋಷಣೆಯಾಗಲಿದೆ; ನಿರಾಕರಿಸಿದರೆ ಸಾಕ್ಷ್ಯಾಧಾರ ವಿಚಾರಣೆ ಪ್ರಾರಂಭವಾಗುತ್ತದೆ. ಸಾಕ್ಷಿಗಳ ಸಂಖ್ಯೆ ಹೆಚ್ಚಿನದಿರುವ ಕಾರಣ, ವಿಚಾರಣೆ ಸುಮಾರು 2 ವರ್ಷಗಳವರೆಗೆ ಬೇಕಾಗಬಹುದು ಎಂದು ಕಾನೂನು ವಲಯ ಅಂದಾಜು ಮಾಡುತ್ತಿದೆ.
