ಬೆಂಗಳೂರು: ರಸ್ತೆ ಕಾಮಗಾರಿ ಗುಣಮಟ್ಟವನ್ನು ಖಚಿತ ಪಡಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಅಧಿಕಾರಿಗಳಿಗೆ ಸೂಚಿಸಿದರು.
ಬ್ಯಾಟರಾಯನಪುರ ವಿಭಾಗದ ಹಳೆ ವಾರ್ಡ್ ಸಂಖ್ಯೆ 08 ರ ಆಕೃತಿ ಪ್ರಾಸ್ಪೆರಾ ಬಡಾವಣೆಯಲ್ಲಿ ಇಂದು (ಸೋಮವಾರ ನ. 03) ಬೆಳಿಗ್ಗೆ 6.00 ಗಂಟೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು ಅಗತ್ಯ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಆಯುಕ್ತರು ಸ್ಥಳದಲ್ಲಿದ್ದ ಅಭಿಯಂತರರಿಗೆ ರಸ್ತೆ ನಿರ್ಮಾಣದ ವೇಳೆ ಕೆಂಬಾರ್ ನೀಡಿರುವುದನ್ನು ಖಚಿತಪಡಿಸಿಕೊಳ್ಳಲು, ಜೊತೆಗೆ ಜಲಮಂಡಳಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಮ್ಯಾನ್‌ಹೋಲ್‌ಗಳನ್ನು ರಸ್ತೆಯ ಮಟ್ಟಕ್ಕೆ ಎತ್ತರಿಸುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಅದೇ ರೀತಿ ಕಾಂಕ್ರೀಟ್ ಚರಂಡಿಗಳಲ್ಲಿ ನಿಯಮಿತವಾಗಿ ಡಿಸಿಲ್ಟಿಂಗ್ ಕಾರ್ಯಗಳನ್ನು ನಡೆಸಿ, ನೀರಿನ ಹರಿವು ಸುಗಮವಾಗುವಂತೆ ನೋಡಿಕೊಳ್ಳಲು ಹಾಗೂ ರಸ್ತೆಯ ಗುಣಮಟ್ಟವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ನಿರ್ದೇಶನ ನೀಡಿದರು. ಇದನ್ನೂ ಓದಿ: ಶಿಕ್ಷಣ, ಪ್ರತಿಭೆ ಯಾರ ಸ್ವತ್ತೂ ಅಲ್ಲ: ಸಿಎಂ
ಪರಿಶೀಲನೆ ವೇಳೆ ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರರಾದ ರಂಗನಾಥ್, ಸಂಬಂಧಿಸಿದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
