ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿರುವ ಪ್ರಸಿದ್ಧ ಸ್ಥಳಗಳಿಗೆ ಬಾಂಬ್ ಬೆದರಿಕೆಯ ಕರೆಗಳು ಈಗಾಗಲೇ ಎಷ್ಟೋ ಬಂದು ಹೋಗಿವೆ. ವಿಧಾನಸೌಧ, ರಾಜಭವನ ಸೇರಿದಂತೆ ಹಲವಾರು ಪ್ರಸಿದ್ಧ ಸ್ಥಳಗಳಿಗೆ ಬಾಂಬ್ ಬೆದರಿಕೆಯ ಕರೆಗಳು ಬಂದಿದ್ದು, ಅದರಂತೆ ಮತ್ತೆ ಇದೀಗ ಬೆಂಗಳೂರು ನಗರದಲ್ಲಿರುವ ಹಲಸೂರು ಗುರುದ್ವಾರಕ್ಕೆ ಬಾಂಬ್ ಬೆದರಿಕೆಯ ಕರೆ ಬಂದಿದೆ ಎಂದು ತಿಳಿದುಬಂದಿದೆ.
ಹೌದು, ಹಲಸೂರು ಮುಖ್ಯ ರಸ್ತೆಯಲ್ಲಿರುವ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಬಾತ್ರೂಮ್ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಮೇಲ್ನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಸಮುದಾಯಗಳ ನಡುವೆ ಏಕೆ ತಾರತಮ್ಯ ಮಾಡುತ್ತಿದೆ?: ಬಿವೈವಿ
ಹಲಸೂರು ಕೆರೆ ಬಳಿಯಿರುವ ಗುರುಸಿಂಗ್ ಸಭಾ ಗುರುದ್ವಾರಕ್ಕೆ ಕಳೆದ 4 ದಿನದ ಹಿಂದೆ `De-Brahminize Dravidistan’ ಎಂಬ ಸಂಘಟನೆಯಿಂದ ರಾಜ ಗಿರಿ ಎಂಬಾತನ ಹೆಸರಿನಲ್ಲಿ ಗುರುದ್ವಾರದ ಅಧಿಕೃತ ಮೇಲ್ ಐಡಿಗೆ ಬಾಂಬ್ ಬೆದರಿಕೆ ಬಂದಿದೆ. ಮೇಲ್ನಲ್ಲಿ, ಶೀಘ್ರವೇ 4 RDX IED ನಿಮ್ಮ ಗುರುದ್ವಾರದ ಬಾತ್ರೂಮ್ನಲ್ಲಿ ಬಾಂಬ್ ಸ್ಫೋಟಿಸುತ್ತದೆ. 8 ಗಂಟೆಯೊಳಗೆ ಎಲ್ಲವನ್ನೂ ಸ್ಥಳಾಂತರಿಸಿ ಎಂದು ಬರೆದಿದ್ದಾರೆ.
ಈ ಕುರಿತು ಋಷಿಪಾಲ್ ಸಿಂಗ್ ಎಂಬುವವರು ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
