ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿರುವ ಬಿಜೆಪಿ ಸಂಸದರು ಖಾಲಿಟ್ರಂಕ್ ಗಳಿದಂತೆ ಕೇವಲ ಅವರು ಬರಿ ಸದ್ದು ಮಾಡುತ್ತಾರೆ ಹೊರತಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಕೇಂದ್ರದಲ್ಲಿ ಪ್ರಸ್ತಾಪಿಸುವುದಿಲ್ಲ.
ಸಂಸದರಾಗಲಿ ಅಥವಾ ಕೇಂದ್ರ ಸಚಿವರಾಗಲಿ ಕರ್ನಾಟಕ ರಾಜ್ಯದ ಬಗ್ಗೆ ಕೇಂದ್ರದಲ್ಲಿ ಪ್ರಸ್ತಾಪ ಮಾಡಿದರೆ ನಮ್ಮ ರಾಜ್ಯಕ್ಕೆ ಒಳಿತಾಗುತ್ತದೆ. ಅದನ್ನು ಬಿಟ್ಟು ಬರೀ ಖಾಲಿ ಟ್ರಂಕಿನಂತೆ ಸೌಂಡು ಮಾಡಿದರೆ ಏನು ಪ್ರಯೋಜನ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಕೆಲವೊಂದಷ್ಟು ಖಾಲಿ ಟ್ರಂಕುಗಳಿವೆ. ಅವು ಕೇವಲ ಶಬ್ದ ಮಾತ್ರ ಮಾಡುತ್ತವೆ. ಬರೀ ಶಬ್ದ ಮಾಡುವವರು ಸಂಸತ್ ನಲ್ಲಿ ಮಾತನಾಡಿ, ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ 10 ರೂಪಾಯಿಯಾದರೂ ಅನುದಾನ ತೆಗೆದುಕೊಂಡು ಬರಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಛೇಡಿಸಿದರು.
ಬರೀ ಶಬ್ದ ಮಾಡುವವರಿಗೂ ನಾನು ಅನುದಾನದ ವಿಚಾರವಾಗಿ ಎಲ್ಲಾ ಮಾಹಿತಿಗಳನ್ನು ಕಳುಹಿಸಿ ಕೊಡುತ್ತಿದ್ದೇನೆ. ಏಕೆಂದರೆ ಇದುವರೆಗೂ ಯಾರೊಬ್ಬರು ಅನುದಾನ ತಂದಿಲ್ಲ, ತರಲು ಆಸಕ್ತಿಯನ್ನೂ ತೋರಿಲ್ಲ. ಪ್ರಧಾನಿಯವರನ್ನೂ ಭೇಟಿ ಮಾಡಿಲ್ಲ. ರಾಜ್ಯಕ್ಕೆ, ಅದರಲ್ಲೂ ಬೆಂಗಳೂರಿಗಂತೂ ಏನೇನೂ ತಂದಿಲ್ಲ ಎಂದರು. ಇದನ್ನೂ ಓದಿ: ಲಿಫ್ಟ್‌ನಲ್ಲಿ ಸಿಲುಕಿದ ಸಚಿವರು, ಶಾಸಕರು!
ಬೆಂಗಳೂರು ಅಭಿವೃದ್ಧಿಗೆ ಎಲ್ಲಾ ಪಕ್ಷಗಳು ಕೊಡುಗೆ ನೀಡಿವೆ. ನಾನು ಒಬ್ಬನೇ ಅಥವಾ ನಮ್ಮ ಸರ್ಕಾರದಿಂದಲೇ ಎಲ್ಲಾ ಆಗಿದೆ ಎಂದು ಹೇಳುವುದಿಲ್ಲ. ಬೆಂಗಳೂರು ದೇಶದಲ್ಲಿಯೇ ಪ್ರಮುಖ ನಗರವಾಗಿದೆ. ಇದನ್ನು ಇನ್ನೂ ಅತ್ಯುತ್ತಮ ನಗರವನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಇಲ್ಲಿ ರಾಜಕೀಯಕ್ಕಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಹೇಳಿದರು.
