ದೆಹಲಿ: ಬಿಬಿಎಂಪಿ ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇಂದು (ಸೋಮವಾರ ಆ. 04) ರಂದು ಬಿಬಿಎಂಪಿ ಚುನಾವಣೆ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು. ಇಂದು ನಡೆದ ವಿಚಾರಣೆಯಲ್ಲಿ ಬಿಬಿಎಂಪಿ ಚುನಾವಣೆಯ ಕುರಿತು ಮತ್ತೆ ನವಂಬರ್ 3ಕ್ಕೆ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ನ್ಯಾ. ಸೂರ್ಯಕಾಂತ್ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹ್ಟಗಿ, ಸರ್ಕಾರ ನೆಪಗಳನ್ನೊಡ್ಡಿ ಚುನಾವಣೆಯನ್ನು ಮುಂದೂಡುತ್ತಿದೆ. ಉದ್ದೇಶಪೂರ್ವಕವಾಗಿ ಇದನ್ನು ಮಾಡಲಾಗುತ್ತಿದೆ. ಎಲ್ಲವನ್ನು ಬದಿಗಿರಿಸಿ ಶೀಘ್ರ ಚುನಾವಣೆ ನಡೆಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಮುಂದೂಡಿಕೆ: ಡಿಕೆಶಿ
ಸರ್ಕಾರ ಪರ ವಾದ ಮಂಡಿಸಿದ ವಕೀಲರು, ನವೆಂಬರ್ ವೇಳೆಗೆ ಪುನರ್ ವಿಂಗಡನೆ, ಮೀಸಲಾತಿ ಪ್ರಕ್ರಿಯೆ ಮುಗಿಸಲಾಗುವುದು. ಇದಕ್ಕೆ ಸಮಯ ಬೇಕು ಈ ಬಗ್ಗೆ ಈಗಾಗಲೇ ಅಫಿಡವಿಟ್ ಸಲ್ಲಿಸಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ನವೆಂಬರ್ 1ರ ವೇಳೆ ಸರ್ಕಾರ ಏನು ಮಾಡಲಿದೆ ಎಂದು ವಿಸ್ತೃತ ಮಾಹಿತಿಯನ್ನು ನೀಡಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
