ಸ್ವಯಿಚ್ಛೆಯಿಂದ ಎಲ್ಲರೂ ಮತ ಚಲಾಯಿಸಿ: ತುಷಾರ್ ಗಿರಿ ನಾಥ್

ಸ್ವಯಿಚ್ಛೆಯಿಂದ ಎಲ್ಲರೂ ಮತ ಚಲಾಯಿಸಿ: ತುಷಾರ್ ಗಿರಿ ನಾಥ್

ಬೆಂಗಳೂರು: ಏಪ್ರಿಲ್ 26 ಶುಕ್ರವಾರದಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು ಈ ಚುನಾವಣೆಗೆ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಸ್ವಯಿಚ್ಛೆಯಿಂದ ಮತ ಚಲಾಯಿಸಬೇಕು ಎಂದು ತುಷಾರ್ ಗಿರಿ ನಾಥ್ ಹೇಳಿದ್ದಾರೆ. ಆಮೀಷಕ್ಕೆ ಒಳಗಾಗದೆ ಸ್ವಯಿಚ್ಛೆಯಿಂದ ಎಲ್ಲರೂ ಮತ ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ವಿದ್ಯಾರ್ಥಿಗಳಲ್ಲಿ ಹಾಗೂ ಎಲ್ಲಾ ಮತದಾರರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.

ಮಹದೇವಪುರದ ಗುಂಜೂರು ಬಳಿಯಿರುವ ಕೃಪಾನಿಧಿ ಗ್ರೂಫ್ ಆಫ್ ಇನ್ಸ್ಟಿಟ್ಯೂಷನ್ಸ್ ನಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಮತದಾನದ ಪ್ರಮಾಣವನ್ನು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸ್ವಯಿಚ್ಛೆಯಿಂದ ಮುಂದೆ ಬಂದು ಮತದಾನ ಮಾಡಬೇಕೆಂದು ತಿಳಿಸಿದರು.

ಚುನಾವಣೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಎಲ್ಲಾ ಕಡೆ ನಿಗಾವಹಿಸಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದ್ದಾರೆ. ನಿಮಗೇನಾದರು ಆಮೀಷದ ಕುರಿತು ಮಾಹಿತಿ ಲಭ್ಯವಾದಲ್ಲಿ ಕೂಡಲೆ ಸಿವಿಜಿಲ್ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ಮಹದೇವಪುರ ವಲಯ ಆಯುಕ್ತರಾದ ರಮೇಶ್, ವಲಯ ಜಂಟಿ ಆಯುಕ್ತರಾದ ದಾಕ್ಷಾಯಿಣಿ, ಕೃಪಾನಿಧಿ ಕಾಲೇಜಿನ ನಿರ್ದೇಶಕರಾದ ಡಾ. ಸ್ಯಾಮ್ ಫಾಲ್, ಉಪಾಧ್ಯಕ್ಷರಾದ ಗೀತಾ ನಾಗ್ಪಾಲ್, 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related