ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆಯಿದೆ: ಡಿಕೆಶಿ

ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆಯಿದೆ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳನ್ನು ಮುಟ್ಟುವುದು ಬಿಜೆಪಿ- ದಳದ ಹಣೆಯಲ್ಲಿ ಬರೆದಿಲ್ಲ. ಇದಕ್ಕೆ ಕಾಂಗ್ರೆಸ್ ಅವಕಾಶ ಕೊಡುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಮತ್ತಿತರರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಗ್ಯಾರಂಟಿಗಳನ್ನು ತೆಗೆದುಹಾಕುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಆದರೆ ಯಡಿಯೂರಪ್ಪ, ಕುಮಾರಸ್ವಾಮಿ, ಅಶೋಕ ಅವರಿಗೆ ಗ್ಯಾರಂಟಿಗಳನ್ನು ಮುಟ್ಟಲು ರಾಜ್ಯದ ಜನ ಅವಕಾಶ ನೀಡುವುದಿಲ್ಲ.

ಕಾಂಗ್ರೆಸ್ ಪಕ್ಷದ ಮೇಲಿನ ಜನರ ಪ್ರೀತಿ ಕಂಡು ಅವರಿಗೆ ಅಸೂಯೆ ಆಗಿದೆ. ಆದ ಕಾರಣ ನಮ್ಮ ತಾಯಂದಿರ ಬಗ್ಗೆ ಮಾತನಾಡುತ್ತಿದ್ದಾರೆ. ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿರುವ ಅವರಿಗೆ ರಾಜ್ಯದ ಜನರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿಗಳು ಸೇರಿ ಕೈ ಗಟ್ಟಿಯಾಯಿತು ಎನ್ನುವುದಕ್ಕೆ ನಿಮ್ಮ ಹೇಳಿಕೆಗಳೇ ಸಾಕ್ಷಿ. ಗೀತಾ ಶಿವರಾಜ್ ಕುಮಾರ್ ಅವರ ನಾಮಪತ್ರ ಸಲ್ಲಿಕೆ ವೇಳೆ ಪಕ್ಷ ಭೇದ ಮರೆತು ಸೇರಿದ್ದ ಜನರನ್ನು ನೋಡಿದ ನಂತರ ಅನಿಸಿತು, ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಸುಪುತ್ರ ರಾಘವೇಂದ್ರ ಗೆಲ್ಲಲು ಸಾಧ್ಯವಿಲ್ಲ ಎಂದು.

ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಹಾಗೂ ಗ್ಯಾರಂಟಿಗಳ ಅಲೆಯಿದೆ. ಇಡೀ ದೇಶವೇ ಕರ್ನಾಟಕದ ಕಡೆಗೆ ತಿರುಗಿ ನೋಡುತ್ತಿದೆ. ಮಂಗಳವಾರ ಕೇರಳ ರಾಜ್ಯ ಪ್ರವಾಸಕ್ಕೆ ಹೋಗಿದ್ದೆ, ಅಲ್ಲಿಯೂ ಸಹ ಕಾಂಗ್ರೆಸ್ 20 ಸ್ಥಾನಗಳನ್ನು ಗೆಲ್ಲಲಿದೆ.

ಇಡೀ ದೇಶದಲ್ಲಿ 100 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಎನ್ಡಿಎ ಬದಲಾಯಿಸಿದೆ. ರಾಜ್ಯದಲ್ಲಿ 14 ಸ್ಥಾನಗಳನ್ನು ಬದಲಾಯಿಸಿದೆ. ಯಾವುದೇ ಕಾರಣಕ್ಕೂ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. “ಇಂಡಿಯಾ ಒಕ್ಕೂಟ ಗೆದ್ದೇ, ಗೆಲ್ಲಲಿದೆ”.

ನಿರುದ್ಯೋಗ, ಬೆಲೆಏರಿಕೆ ಸಮಸ್ಯೆಯ ಬಗ್ಗೆ ಜನರು ಚಿಂತನೆ ಮಾಡುತ್ತಿದ್ದಾರೆ. ಧರ್ಮ, ಜಾತಿ ಆದಾರದ ಮೇಲೆ ನಡೆಯುತ್ತಿರುವ ರಾಜಕಾರಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ಪ್ರಧಾನಿ ಮೋದಿ ಅವರು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದಾರೆ.

ಬಿಜೆಪಿಯ ಹಾಲಿ ಸಂಸದರೊಬ್ಬರು 400 ಸ್ಥಾನಗಳನ್ನು ಕೊಡಿ, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಎರಡು ಮೂರು ಬಾರಿ ಹೇಳಿದರು. ಅವರನ್ನು ಪಕ್ಷದಿಂದ ಉಚ್ಚಾಟಿಸುವುದಕ್ಕೆ ಬಿಜೆಪಿ ಏಕೆ ಮುಂದಾಗಿಲ್ಲ? ಸಂವಿಧಾನ ಬದಲಾವಣೆ ಹೇಳಿಕೆಯ ನಂತರ ಉತ್ತರ ಭಾರತದಲ್ಲಿ ಜನ ದಂಗೆ ಎದ್ದಿದ್ದಾರೆ. ಆದ ಕಾರಣ ಈಗ ಬದಲಾವಣೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ.

 

ಕರಡಿ ಸಂಗಣ್ಣ ಅವರು ತಳಮಟ್ಟದ ರಾಜಕಾರಣದಿಂದ ಬೆಳೆದವರು. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ನಂತರ 1999 ರಲ್ಲಿ ಜೆಡಿಯು ಪಕ್ಷದಿಂದ ಶಾಸಕರಾಗಿದ್ದರು. ನಂತರ ಎರಡು ಬಾರಿ ಸಂಸದರಾಗಿದ್ದರು. ಕೊಪ್ಪಳ ಭಾಗದಲ್ಲಿ ಭಾರಿ ಜನಸಂಪರ್ಕ ಹೊಂದಿರುವ ವ್ಯಕ್ತಿ.

ಇದೇ ವೇಳೆ ಅರಕಲಗೂಡಿನ ಪುಟ್ಟಸ್ವಾಮಿ, ರಾಜಾಜಿನಗರದ ಕೃಷ್ಣಮೂರ್ತಿ, ಮೂರು ಬಾರಿ ಶಾಸಕರಾಗಿದ್ದ ಶಿವಪುತ್ರ ಮಾಳಗಿ, ಪತ್ರಕರ್ತೆ ಸ್ವಾತಿ ಚಂದ್ರಶೇಖರ್ ಅವರನ್ನು ಇದೇ ಸಂದರ್ಭದಲ್ಲಿ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಶಿವರಾಜ್ ತಂಗಡಗಿ, ಶಾಸಕ ಲಕ್ಷ್ಮಣ ಸವದಿ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.

Related