ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ

ಬೀದಿ ಬದಿ ವ್ಯಾಪಾರಿಗಳ ಬದುಕು ಅತಂತ್ರ

ಪಾವಗಡ : ಬೀದಿ ಬದಿಯ ವ್ಯಾಪಾರಿಗಳಿಗೆ ಕೊರೋನಾ ಲಾಕ್‌ಡೌನ್ ಅಕ್ಷರಶಹ ಕಾರ್ಮೋಡದಂತೆ ಆವರಿಸಿದ್ದು, ಕಳೆದ 50 ದಿನಗಳಿಂದ ವ್ಯಾಪಾರ ವಹಿವಾಟಿಲ್ಲದೇ ಬೀದಿ ಬದಿ ವ್ಯಾಪಾರಿಗಳ ಜೀವನ ಬರ್ಬಾದ್ ಎನ್ನುವಂತಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಅಂಗಡಿ ಕಟ್ಟಡ ಬೇಕಿಲ್ಲ. ಕರೆಂಟ್ ಬಿಲ್, ಜಿಎಸ್‌ಟಿ ಯಾವ ಕಾಟವೂ ಇಲ್ಲ’ ಎಂದುಕೊಳ್ಳುವವರೇ ಹೆಚ್ಚು. ಆದರೆ, ಜೀವನೋಪಾಯಕ್ಕಾಗಿ ಬೀದಿ ಬದಿಯಲ್ಲಿ ಸೊಪ್ಪು, ತರಕಾರಿ, ಹಣ್ಣು, ತಿಂಡಿ ಮಾರಿ ಬದುಕುವವರ ಬದುಕು ಮೂರಕ್ಕೆ ಇಳಿದಿಲ್ಲ, ಆರಕ್ಕೆ ಏರಿಲ್ಲ ಎಂಬಂತಾಗಿದೆ. ತಲೆಮಾರುಗಳಿಂದಲೂ ಇದೇ ವೃತ್ತಿ ಮಾಡಿಕೊಂಡಿದ್ದರೂ ಸ್ವಂತ ಸೂರಿಲ್ಲ. ಸಾಲ ಮುಗಿದಿಲ್ಲ, ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ, ಬದುಕಿನ ಬಂಡಿ ನಿಂತಲ್ಲೇ ಇದೆ. ಇನ್ನು ದಿನನಿತ್ಯ ವ್ಯಾಪಾರ ಮಾಡುವ ಜಾಗದಲ್ಲಿ ಎದುರಿಸುವ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಸಾಗಿದೆ.

ನಿತ್ಯ ಸಂಜೆಯಾದರೆ ಸಾಕು ಆಹಾರ ಪ್ರಿಯರಿಗೆ ಮಿರ್ಚಿ-ಬಜ್ಜಿ, ಎಗ್‌ರೈಸ್, ಪಾನಿಪುರಿ, ಬನ್‌ಮಿರ್ಚಿ, ಇಡ್ಲಿ-ವಡಾ, ಗೋಬಿ ಮಂಚೂರಿ, ನೂಡಲ್ಸ್ ಸೇರದಂತೆ ಅನೇಕ ಖಾದ್ಯಗಳನ್ನು ಉಣಬಡಿಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಪಾವಗಡ ಪಟ್ಟಣದಲ್ಲಿ ಕೆಲವು ಸಂಚಾರ ಮಳಿಗೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಉಳಿದವರ ಗೋಳು ಆ ದೇವರಿಗೇ ಪ್ರಿಯವಾದಂತಾಗಿದೆ.

ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯದಿಂದ ಬಂದು ಬೀದಿ ಬದಿಯಲ್ಲಿ ಡಬ್ಬಾ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವವರು ಅತ್ತ ತಮ್ಮೂರಿಗೂ ಹೋಗಲಾಗದೇ, ಇತ್ತ ವ್ಯಾಪಾರ ಮಾಡಲು ಆಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಉಳಿದಂತೆ ಮೊಬೈಲ್ ಕವರ್, ವಾಚ್, ಬಟ್ಟೆ ಹಾಗೂ ಇತರ ಸ್ಟೇಷನರಿ ವಸ್ತುಗಳನ್ನು ಮಾರುತ್ತಿದ್ದವರ ಗೋಳು ಇದೇ ರೀತಿಯಾಗಿದೆ. ಇವರಿಗೆ ಕೊರೊನಾ ಕಾರ್ಮೋಡ ಸರಿಯುವುದು ಯಾವಾಗ ಎಂಬ ಪ್ರಶ್ನೆ ಕಾಡುತ್ತಿದೆ ಇವರ ಬದುಕು ಕೇಳುವವರು ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ…..?

Related