ಪಕ್ಕದ ಮನೆಯಿಂದ ಊಟ ಪಡೆದಿದ್ದಕ್ಕೆ ಪತ್ನಿಗೆ ತಲಾಖ್

ಪಕ್ಕದ ಮನೆಯಿಂದ ಊಟ ಪಡೆದಿದ್ದಕ್ಕೆ ಪತ್ನಿಗೆ ತಲಾಖ್

ಲಕ್ನೋ: ಲಾಕ್ಡೌನ್ ವೇಳೆ ಪಕ್ಕದ ಮನೆಯವರ ಬಳಿಯಿಂದ ಊಟ ಪಡೆದುಕೊಂಡಳು ಎಂಬ ಕಾರಣಕ್ಕೆ ಪತಿಯೋರ್ವ ತನ್ನ ಪತ್ನಿಗೆ ತಲಾಖ್ ನೀಡಿರುವ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಈ ಘಟನೆ ಗುರುವಾರ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ನೀಡಿದ ಬಳಿಕ ಬೆಳಕಿಗೆ ಬಂದಿದೆ. ತಲಾಖ್ ನೀಡಿದ ಪತಿಯನ್ನು ಜುಲ್ಫಿಕರ್ ಎಂದು ಗುರುತಿಸಲಾಗಿದೆ. ಈತ ತಾನು 12 ವರ್ಷ ಜೊತೆಗೆ ಸಂಸಾರ ಮಾಡಿದ ತನ್ನ ಹೆಂಡತಿ ಜರೀನಾಗೆ ತಲಾಖ್ ನೀಡಿದ್ದಾನೆ.

ಲಾಕ್ಡೌನ್ ಇರುವುದರಿಂದ ಮನೆಯಲ್ಲಿ ರೇಷನ್ ಇರಲಿಲ್ಲ. ಈ ಕಾರಣಕ್ಕೆ ಜರೀನಾ ನೆರೆಹೊರೆಯವರಿಂದ ಆಹಾರವನ್ನು ಪಡೆದುಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಆಕೆಯ ಪತಿ ಜುಲ್ಫಿಕರ್ ಮನೆಗೆ ಬಂದು ಜರೀನಾಳನ್ನು ಚೆನ್ನಾಗಿ ಥಳಿಸಿದ್ದಾನೆ. ಆಗ ಜರೀನಾ ಸ್ವಲ್ಪ ವಿರೋಧ ಮಾಡಿದ್ದಾಳೆ. ಇದರಿಂದ ಜಲ್ಫಿಕರ್ ತಲಾಖ್ ನೀಡಿದ್ದಾನೆ.

ಇದರಿಂದ ಮನನೊಂದ ಜರೀನಾ ಎರಡು ದಿನಗಳ ಬಳಿಕ ಬರೇಲಿ ಜಿಲ್ಲೆಯ ಬಾರದಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೊತೆಗೆ ಈ ವಿಚಾರದ ಬಗ್ಗೆ ಮಾತನಾಡಿರುವ ಜರೀನಾ, ನಾನು ಜುಲ್ಫಿಕರ್ ಮದುವೆಯಾಗಿ 12 ವರ್ಷವಾಗಿದೆ. ನಮಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ ಪಕ್ಕದ ಮನೆಯವರ ಬಳಿ ಊಟವನ್ನು ಪಡೆದೆ ಎಂಬ ಕ್ಷುಲ್ಲಕ ಕಾರಣಕ್ಕೆ ಆತ ನನಗೆ ತಲಾಖ್ ಹೇಳಿದ್ದಾನೆ. ನನಗೆ ನ್ಯಾಯ ಕೊಡಿಸಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ.

Related