ಲಾರಿ ಸಂಚಾರ ನಿರ್ಬಂಧಿಸಿ

ಲಾರಿ ಸಂಚಾರ ನಿರ್ಬಂಧಿಸಿ

ಸಂಡೂರು: ಪ್ರತಿ ಸೋಮವಾರ ಬೆಳಗ್ಗೆ 11ಗಂಟೆವರೆಗೆ ಅದಿರು ಸಾಗಣೆ ಲಾರಿಗಳು ಸಂಚರಿಸದಂತೆ ನಿರ್ಬಂಧ ಹಾಕಿ ಕುಮಾರಸ್ವಾಮಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಶಾಸಕ ತುಕಾರಾಂ ಸೂಚಿಸಿದರು.ತಾಲೂಕಿನ ಕೆಲ ಆಯ್ದ ಸ್ಥಳಗಳಲ್ಲಿ ಗಣಿ ಲಾರಿಗಳ ಅಬ್ಬರದ ಓಡಾಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆ ಶುಕ್ರವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ಅಧಿಕಾರಿಗಳು ಹಾಗೂ ಮೈನಿಂಗ್ ಪ್ರತಿನಿಧಿಗಳ ಸಭೆಯಲ್ಲಿ ಖಡಕ್ ಸೂಚನೆ ನೀಡಿದರು.

ನಂದಿಹಳ್ಳಿ ಜನರು ಹಾಗೂ ಪಿಜಿ ವಿದ್ಯಾರ್ಥಿಗಳು ತೆರಳುವುದಕ್ಕೂ ಸಾಕಷ್ಟು ತೊಂದರೆಯಾಗಿದೆ. ಕುಮಾರಸ್ವಾಮಿ ದೇವಸ್ಥಾನವಿರುವ ಸ್ವಾಮಿಮಲೇ ಬ್ಲಾಕ್ ನಲ್ಲಿ ಜಿಂದಾಲ್ನ ನಂದಿ ಮೈನ್ಸ್, ಕೆಎಸ್ಎಂಸಿಎಲ್, ಎನ್ಎಂಡಿಸಿ, ಸ್ಮಯೋರ್ ಸೇರಿದಂತೆ ಹತ್ತಾರು ಗಣಿಗಳಿಂದ ಸಾವಿರಾರು ಲಾರಿಗಳು ಸಂಚರಿಸುತ್ತಿವೆ. ಇದರಿಂದ ಜನರ ಓಡಾಟಕ್ಕೆ ತೊಂದರೆ ಆಗುತ್ತಿದೆ ಟ್ರಾಫಿಕ್ ಅಧಿಕಾರಿಗಳು ಒಮ್ಮೆಯಾದರೂ ಮೈನಿಂಗ್ ಗಳಿಗೆ ಹೋಗುವ ಕೆಲಸ ಮಾಡಿದ್ದೀರಾ ಎಂದು ಗರಂ ಅದ ಶಾಸಕರು, ಬಿಕೆಜಿ,ವೇಸ್ಕೊ, ಬಿಎಂಎಂ, ಮತ್ತಿತರ ಗಣಿ ಪ್ರದೇಶಗಳಿಗೆ ಕನ್ವೇಯರ್ ಮತ್ತು ರೈಲ್ವೆ ಸೈಡಿಂಗ್ ಆಗುವವರೆಗೆ ಬೃಹತ್ ಲಾರಿಗಳನ್ನು ಗಣಿಪ್ರದೇಶ ಪ್ರವೇಶಕ್ಕೆ ಅವಕಾಶ ಕೊಡಬೇಡಿ. ಸ್ಮಯೋರ್ ಕಂಪನಿಯಿಂದ ಅದಿರು ಖರೀದಿಸಿದ ಗುಜರಾತ್, ಝರ್ಖಾಂಡ್, ಇತರೆ ರಾಜ್ಯಗಳ ಖರೀದಿದಾರರಿಗೆ ವಾಷಿಂಗ್ ಪ್ಲಾಂಟ್ ಗಳಿಂದ ಅದಿರು ಸಾಗಿಸುವ ಲಾರಿಗಳಿಗೆ ಶನಿವಾರ ಮಧ್ಯಾಹ್ನ 12 ರಿಂದ ಭಾನುವಾರ ಸಂಜೆ 5ರವರೆಗೆ ಅವಕಾಶ ಕೊಡಬೇಕು. ಎನ್ಇಬಿ ಬ್ಲಾಕ್ ನ ಚೌಗಳೆ ಮೈನ್ಸ್ ನಿಂದ ಅದಿರು ಲಾರಿಗಳನ್ನು ಹೊಸಪೇಟೆ ಬೈಪಾಸ್ ಮೂಲಕ ಸಂಚರಿಸುವಂತೆ ಕ್ರಮವಹಿಸಿ ಇದೆಲ್ಲವನ್ನೂ ನಿಯಂತ್ರಿಸಲು ನಿವೃತ್ತ ಯೋಧರು ಅಥವಾ ಇಂಡಸ್ಟ್ರಿಯಲ್ ಪೊಲೀಸರನ್ನು ನೇಮಿಸಿ ಎಂದು ಮೈನಿಂಗ್ ಕಂಪನಿಗಳಿಗೆ ಸಲಹೆ ನೀಡಿದರು.

ಡಿವೈಎಸ್ಪಿ ಹರೀಶ್ ಮಾತನಾಡಿ ಅಪಘಾತ ಸಂಧರ್ಭದಲ್ಲಿ ತೀವ್ರತೆ ಆಧಾರದ ಮೇಲೆ ಲಾರಿಗಳಿಗೆ ವರ್ಷ, ಆರು ತಿಂಗಳು, ಡ್ರಿಂಕ್ ಅಂಡ್ ಡ್ರೈವ್ ಮಾಡಿದವರಿಗೆ ಕನಿಷ್ಠ ಮೂರು ತಿಂಗಳು ಕಾಲ ಪರ್ಮಿಟ್ ವಿತರಿಸಬಾರದು. ಮೈನಿಂಗ್ ಪ್ರದೇಶದಲ್ಲಿ ಲಾರಿಗಳ ನಿಲುಗಡೆಗೆ ಅವಕಾಶ ಮಾಡಿಕೊಡುವುದರಿಂದ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಬವುದು ಎಂದರು.

ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಮಹಾವೀರ್ ಜೈನ್, ಅರಣ್ಯ ಇಲಾಖೆ ಡಿಆರ್ ಎಫ್ಓ ತಿಪ್ಪೇಸ್ವಾಮಿ, ಸ್ಮಯೋರ್ ಸಂಸ್ಥೆಯ ಮೈನಿಂಗ್ ವಿಬಾಗದ ಸಲೀಂ ಮಾತನಾಡಿದರು. ರಸ್ತೆ, ಟ್ರಾಫಿಕ್ ನಿರ್ವಹಣೆ ವಿಷಯದಲ್ಲಿ ಸ್ಥಳೀಯವಾಗಿ ಸಾಕಷ್ಟು ಸವಾಲುಗಳಿದ್ದು ಪಿಡಬ್ಲ್ಯೂಡಿ ಎಇಇ ಪುಬಾಲನ್ ಅವರು ಹೊಸಪೇಟೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಬದಲಿಗೆ ಸಂಡೂರಿನಲ್ಲಿಯೇ ನೆಲೆಸುವಂತೆ ಶಾಸಕರು ತಿಳಿಸಿದರು.

ಸಭೆಯಲ್ಲಿ ಇಓ ಪಿ. ವಿವೇಕಾನಂದ, ತಹಶೀಲ್ದಾರ್ ಎಚ್.ಜೆ. ರಶ್ಮಿ, ಸಂಡೂರು ಪೊಲೀಸ್ ವೃತ್ತ ನಿರೀಕ್ಷಕ ಎಂ.ಎಂ ಡಪ್ಪಿನ್, ಪಿಎಸೈಗಳಾದ ಬಸವರಾಜ್ ಅಡವಿಬಾವಿ, ಶೈಲಜಾ, ಜಿಂದಾಲ್, ಎನ್ಎಂಡಿಸಿಯ ಮೈನಿಂಗ್ ಅಧಿಕಾರಿಗಳು ಇದ್ದರು.

Related