ನೌಕರರ ವೇತನ ಬಿಡುಗಡೆಗೆ ಮನವಿ

ನೌಕರರ ವೇತನ ಬಿಡುಗಡೆಗೆ ಮನವಿ

ತುಮಕೂರು:ಮಹಾಮಾರಿ ಕೋವಿಡ್-೧೯ ಹಿನ್ನಲೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನವಿಲ್ಲದೆ ಕುಟುಂಬದ ಜೀವನ ನಿರ್ವಹಣೆ ಮಾಡಲಾಗದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು, ಕೂಡಲೇ ಅವರಿಗೆ ವೇತನ ಬಿಡುಗಡೆ ಮಾಡುವಂತೆ ಕೆಪಿಸಿಸಿ ವಕ್ತಾರರಾದ ಮುರಳೀಧರ ಹಾಲಪ್ಪ ಅವರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ವೈ.ಎಸ್. ಸಿದ್ಧೇಗೌಡ ಅವರಿಗೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ  ಘಟಕದ ವತಿಯಿಂದ ನಿಯೋಗದಲ್ಲಿ ತೆರಳಿ ವಿವಿಗೆ ಮನವಿ ಸಲ್ಲಿಸಿದ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ಜಿಲ್ಲೆಯ ತುಮಕೂರು ನಗರ, ಗ್ರಾಮಾಂತರ, ಮಧುಗಿರಿ, ಕೊರಟಗೆರೆ, ಪಾವಗಡ, ತುರುವೇಕೆರೆ, ಕುಣಿಗಲ್, ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಸೇರಿದಂತೆ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನೂರಾರು ಅತಿಥಿ ಉಪನ್ಯಾಸಕರು ಹಾಗೂ ಗುತ್ತಿಗೆ ಆಧಾರದ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಕಳೆದ ೨-೩ ತಿಂಗಳಿಂದ ವೇತನವಿಲ್ಲದೇ ಕಂಗಾಲಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಗೂ ಈ ಸಂಬಂಧ ದೂರವಾಣಿ ಕರೆಗಳು ಮತ್ತು ಅರ್ಜಿಗಳು ಬಂದಿದ್ದು, ಕೂಡಲೇ ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ವಿದ್ಯಾರ್ಥಿ-ಪೋಷಕರಲ್ಲಿ ಗೊಂದಲ:

ಕೋವಿಡ್-೧೯ ಹಿನ್ನಲೆಯಲ್ಲಿ ವಿಶ್ವವಿದ್ಯಾನಿಲಯಗಳು ಪ್ರವೇಶ ಪ್ರಕ್ರಿಯೆ ಆರಂಭಿಸದೆ ಮತ್ತು ಪರೀಕ್ಷೆ ನಡೆಸದೆ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಹೆಚ್ಚಾಗಿದ್ದು, ಕೂಡಲೇ ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಬರುವ ಪದವಿ ಕಾಲೇಜುಗಳ ಮುಖ್ಯಸ್ಥರುಗಳ ಸಭೆ ನಡೆಸಿ ಗೊಂದಲ ಬಗೆ ಹರಿಸುವಂತೆ ವಿವಿ ಉಪಕುಲಪತಿಗಳಿಗೆ ತಿಳಿಸಿದರು.

ಹೊಸ ಕ್ಯಾಂಪಸ್ ಬೇಗ ಆರಂಭಿಸಿ:

ಈಗಾಗಲೇ ಬೇರೆ ಬೇರೆ ವಿಶ್ವವಿದ್ಯಾನಿಲಯಗಳು ಯುಜಿಸಿಯಿಂದ ೩೦-೪೦ ಕೋಟಿಯಷ್ಟು ಅನುದಾನ ಪಡೆದುಕೊಂಡು ತಮ್ಮದೇ ಆದ ಸ್ವಂತ ಕ್ಯಾಂಪಸ್‌ಗಳನ್ನು ಅಭಿವೃದ್ಧ ಪಡಿಸಿದ್ದು, ತುಮಕೂರು ವಿಶ್ವವಿದ್ಯಾನಿಲಯ ಈವರೆಗೂ ಯುಜಿಸಿಯಿಂದ ಯಾವುದೇ ಅನುದಾನ ಪಡೆಯದೇ ಇರುವುದು ದುರಂತ. ರಾಜ್ಯ ಸರ್ಕಾರದಲ್ಲಂತೂ ಅನುದಾನವಿಲ್ಲ, ಕೇಂದ್ರ ಸರ್ಕಾರದ ಆಯೋಗ ಅಥವಾ ಹೆಚ್‌ಆರ್‌ಡಿ ಮಂತ್ರಿ ರಮೇಶ್ ಪೋಕ್ರಿಯಾಲ್ ಅವರ ಮುಖಾಂತರವಾದರೂ ಅನುದಾನ ಪಡೆದು, ಜೊತೆಗೆ ಸ್ಥಳೀಯ ಸಂಸದರ ಅನುದಾನ ಪಡೆದು ವಿಶ್ವವಿದ್ಯಾನಿಲಯ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಜಿಪಂ ಸದಸ್ಯ ಕೆಂಚಮಾರಯ್ಯ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರುದ್ರೇಶ್, ಉಪಾಧ್ಯಕ್ಷೆ ಮರಿಚನ್ನಮ್ಮ, ನಾಗಮಣಿ, ಜಿ.ಎಸ್. ಸೋಮಣ್ಣ, ನಾಗರಾಜಪ್ಪ, ರೇವಣಸಿದ್ಧಪ್ಪ, ಎನ್‌ಎಸ್‌ಯುಐ ಅಧ್ಯಕ್ಷ ಸುಮುಖ್ ಕೊಂಡವಾಡಿ, ನರಸೀಯಪ್ಪ, ಮಂಜುನಾಥ್, ಟಿ.ಎಸ್. ತರುಣೇಶ್, ವಾಲೆಚಂದ್ರು, ನಟರಾಜು ಮುಂತಾದವರು ಭಾಗವಹಿಸಿದ್ದರು.

ಏಕ ರೂಪ ಪಠ್ಯಕ್ರಮ ಜಾರಿಗೆ ತಂದರೆ ಶೇ.೯೫ ರಿಂದ ೯೮ ರಷ್ಟು ಸ್ವಾತಂತ್ರö್ಯವನ್ನು ವಿಶ್ವವಿದ್ಯಾನಿಲಯಗಳು ಕಳೆದುಕೊಳ್ಳುತ್ತವೆ. ಏಕರೂಪ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಲಿ, ಅಥವಾ ಅಭಿವೃದ್ಧಿಗೊಳಿಸಲಿ ಇದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಇದನ್ನು ಪೂರ್ತಿ ವ್ಯವಸ್ಥೆಯನ್ನೇ ಬದಲಾವಣೆ ಮಾಡುತ್ತೇವೆ ಎಂದರೆ ನಾವು ಒಪ್ಪುವುದಿಲ್ಲ, ಯಾವುದೇ ಕಾರಣಕ್ಕೂ ಏಕರೂಪ ಪಠ್ಯಕ್ರಮ ಜಾರಿಗೆ ತರಬೇಡಿ ಎಂದು ಈಗಾಗಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಹೆಚ್‌ಆರ್‌ಡಿ ಮಂತ್ರಿಗಳಿಗೂ ಇ-ಮೇಲ್ ಮೂಲಕ ಮನವಿ ಮಾಡಲಾಗಿದೆ.

 

Related