ವಾಣಿಜ್ಯ ಮಳಿಗೆಗಳ ಬಾಡಿಗೆ ಪಾವತಿಸಿಲ್ಲ-ಲಕ್ಷ ಲಕ್ಷ ಲೂಟಿ..!

ವಾಣಿಜ್ಯ ಮಳಿಗೆಗಳ ಬಾಡಿಗೆ ಪಾವತಿಸಿಲ್ಲ-ಲಕ್ಷ ಲಕ್ಷ ಲೂಟಿ..!

ಸಂಡೂರು : ಪುರಸಭೆ ಆಡಳಿತ ಕೋಟ್ಯಂತರ ರೂ. ವೆಚ್ಚದಲ್ಲಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿದ ರಿಯಾಯಿತಿ ದರದ ವಾಣಿಜ್ಯ ಮಳಿಗೆಗಳ 70 ಲಕ್ಷ ರೂ. ಬಾಡಿಗೆ ಬಾಕಿಯಿದ್ದು, ಇದರಿಂದ ವ್ಯಾಪಾರಿಗಳು ಹೈರಾಣವಾಗುತ್ತಿದ್ದು ಪುರಸಭೆ ಆದಾಯಕ್ಕೂ ದೊಡ್ಡದಾದ ಹೊಡೆತ ಬಿದ್ದಿದೆ.

15 ವರ್ಷಗಳ ಹಿಂದೆ ಪುರಸಭೆ ಆಡಳಿತ ಪಟ್ಟಣದ 144 ವಾಣಿಜ್ಯ ಮಳಿಗೆ ನಿರ್ಮಿಸಿ ಟೆಂಡರ್ ಮೂಲಕ ವ್ಯಾಪಾರಿಗಳಿಗೆ ಬಾಡಿಗೆ ನೀಡಲು ಮುಂದಾಗಿತ್ತು. ಆದರೆ ವ್ಯಾಪಾರ ಮಾಡುವ ಕನಿಷ್ಠ ಪರವಾಣಿಗೆಯನ್ನೂ ಹೊಂದದ ಪಟ್ಟ ಭದ್ರರು ತಲಾ 3-5 ಮಳಿಗೆಗಳನ್ನು ಪ್ರತಿ ಮಳಿಗೆಗೆ ಮಾಸಿಕ 1. 500 ರೂ. ಗೆ ಬಾಡಿಗೆಗೆ ಪಡೆದಿದ್ದಾರೆ.

ನಂತರ ಬಡ ವ್ಯಾಪಾರಿಗಳಿಗೆ ತಲಾ ಮಳಿಗೆಯನ್ನು ವ್ಯಾಪಾರದ ದಟ್ಟಣೆಯ ಆಧಾರದಲ್ಲಿ ಮಾಸಿಕ 5-10 ಸಾವಿರ ರೂ. ಗೆ ಬಾಡಿಗೆ ನೀಡಿ ಶ್ರಮವಿಲ್ಲದೆ. ಹೆಚ್ಚು ಹಣಗಳಿಸುತ್ತಿದ್ದಾರೆ ಇದೊಂದು ಅಕ್ರಮ ದಂಧೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದ್ದರೂ ಪುರಸಭೆ ಆಡಳಿತ ಇತ್ತೀಚಿನವರೆಗೆ ಜಾಣ ನಿದ್ರೆಗೆ ಜಾರಿದೆ.

ಇದೊಂದು ರೀತಿಯಲ್ಲಿ ಇದು “ಕೊಟ್ಟೋನು ಕೋಡಂಗಿ, ಇಸ್ಕೊಂಡೋನು ಎಂಬ ಮಾತನ್ನು ಸಾಕ್ಷಿಕರಿಸುವ ಘಟನೆಯಂತೆ ಕಂಡು ಬರುತ್ತಿದೆ. ವ್ಯಾಪಾರಿಗಳಿಂದ ಮಾಸಿಕ ಬಾಡಿಗೆಯ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರೂ, ಪುರಸಭೆಯ ಕನಿಷ್ಠ ಬಾಡಿಗೆ ಬಾಕಿ ಕಳೆದ 10 ವರ್ಷಗಳಿಂದ ಪಾವತಿಸಿಲ್ಲ 144 ಮಳಿಗೆಗಳ ಪೈಕಿ ಈವರೆಗೆ 70 ಲಕ್ಷ ರೂ. ಬಾಡಿಗೆ ಬಾಕಿ ಉಳಿಸಿಕೊಂಡಿದೆ.

ಕಳೆದ 10 ವರ್ಷಗಳಿಂದ ಬಾಡಿಗೆಗಾಗಿ ಟೆಂಡರ್ ಕರೆಯದಂತೆ ಈ ಹಿಂದೆ ಟೆಂಡರ್ ಪಡೆದ ಪ್ರಬಲರು ಆಡಳಿತದ ಮೇಲೆ ಹೇರುತ್ತಾರೆಂಬ ಮಾತು ಕೇಳಿಬರುತ್ತಿದ್ದು, ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳು ಉಳ್ಳವರ ಪಾಲಿನ ಗುರಾಣಿಯಂತಾಗಿದೆ.
ಮುಂದುವರಿದ ಒತ್ತುವರಿ

ಪಟ್ಟಣದ ಪುಟ್ ಪಾತ್‌ನಲ್ಲಿ ಒತ್ತುವರಿ ಮುಂದುವರಿದಿದೆ. ಸಾಕಷ್ಟು ಬಡ ವ್ಯಾಪಾರಿಗಳು ವಾಣಿಜ್ಯ ಮಳಿಗೆಗಳಿಗೆ ದುಬಾರಿ ಬಾಡಿಗೆ ಕಟ್ಟಲು ಸಾಧ್ಯವಾಗದೆ ಜೀವನ ನಿರ್ವಹಣೆಗಾಗಿ ಪುಟ್ ಪಾತ್ ಅವಲಂಭಿಸಿದ್ದಾರೆ. 144 ವಾಣಿಜ್ಯ ಮಳಿಗೆ ನಿಜವಾದ ಬಡ ಪುಟ್ ಪಾತ್ ವ್ಯಾಪಾರಿಗಳಿಗೆ ನೀಡಿದಲ್ಲಿ ಪುಟ್‌ಪಾತ್ ತೆರವಿಗೂ ಅನುಕೂಲವಾಗುತ್ತದೆ ಎಂಬುದು ಆಡಳಿತಕ್ಕೆ ಅರ್ಥವಾಗುತ್ತಿಲ್ಲ. ಪುಟ್‌ಪಾತ್‌ನಲ್ಲಿ ಅಂಗಡಿ ತೆರೆಯಲು ಪುರಸಭೆಯ ಕೆಲ ಸಿಬ್ಬಂದಿಗೆ ಅಥವಾ ಮದ್ಯ ವರ್ತಿಗಳಿಗೆ ಕೈ ಬಿಸಿ ಮಾಡಬೇಕಿದೆ. ಇಲ್ಲವಾದಲ್ಲಿ ಅಂಗಡಿ ಆರಂಭಿಸಿದ ಮರು ಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಕಾನೂನಿನ ಪಾಠ ಮಾಡುವ ಸಿಬ್ಬಂದಿಯಿದ್ದಾರೆ. ಬಡ ವ್ಯಾಪಾರಿಗಳಿಂದಲೂ ಸುಲುಗೆ ಮುಂದುವರಿದಿರುವುದು ದುರಂತವೇ ಸರಿ.

ಎಲ್ಲೆಲ್ಲಿ ಎಷ್ಟು ಮಳಿಗೆಗಳು

ಪಟ್ಟಣದ ಪುರಸಭೆ ಬಳಿಯಲ್ಲಿನ 90 ಮಳಿಗೆಗಳ ಬರೋಬ್ಬರಿ 55,87,950 ರೂ. ಬಾಡಿಗೆ ಬಾಕಿಯಿದೆ. ಪುರಸಭೆ ಕಚೇರಿಯ ಎಡಬಾಗದ 14 ಮಳಿಗೆಗಳಿಂದ 2.36.300 ರೂ. ಬಾಕಿಯಿದೆ. ಬಲಬಾಗದ 12 ಮಳಿಗೆಗಳಿಂದ 90,600 ರೂ ಪುರಸಭೆ ಬಸ್ ನಿಲ್ದಾಣದ ಆಟೋ ನಿಲ್ದಾಣದ ಸಮೀಪದ 12 ಮಳಿಗೆಗಳಿಂದ 3,38,400 ರೂ. ಕೂಡ್ಲಿಗಿ ರಸ್ತೆಯಲ್ಲಿರುವ 10 ಮಳಿಗೆಗಳಿಂದ 6,99,600 ರೂ. ಮೇನ್ ಬಜಾರ್ ನ ಕನ್ನಿಕಾ ಪರಮೇಶ್ವರಿ ದೇಗುಲದ ಬಳಿಯ 6 ಮಳಿಗೆಗಳಿಂದ 38,150 ರೂ ಬಾಕಿಯಿದೆ.

ಕವಡೆ ಕಾಸಿನಷ್ಟು ವಸೂಲಿ ಇಲ್ಲ.

ಪಟ್ಟಣದ 144 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ಟೆಂಡರ್ ಕರಾರು ಮಾಡದೆ ಕೆಲವರಿಗೆ ಉದಾರವಾಗಿ ನೀಡಲಾಗಿದೆ. ದಶಕ ಕಳೆದರೂ ಕರಾರು ಮಾಡಿಕೊಂಡಿಲ್ಲ, ಕವಡೆ ಕಾಸಿನಷ್ಟು ಬಾಡಿಗೆ ವಸೂಲಿ ಮಾಡಲು ಸಾಧ್ಯವಾಗಿಲ್ಲದದಿರುವುದು ಈ ಹಿಂದೆ ಆಡಳಿತ ನಡೆಸಿದವರ ಆದ್ಯತೆಯನ್ನು ಎತ್ತಿ ತೋರುತ್ತಿದೆ.

ಪಟ್ಟಣದಲ್ಲಿನ 144 ವಾಣಿಜ್ಯ ಮಳಿಗೆಗಳಿಗೆ ಹೊಸದಾಗಿ ಟೆಂಡರ್ ಕರೆಯುವ ಸಲುವಾಗಿ ಅನುಮತಿಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಿಲ್ಲಾಧಿಕಾರಿಗಳು ಬಾಡಿಗೆ ವಸೂಲಿ ಬಗ್ಗೆ ಕೇಳಿದ ವಿವರಣೆ ನೀಡಿದ್ದೇವೆ. ಈಗಾಗಲೇ ಬಾಡಿಗೆ ನೀಡದ 40 ಮಳಿಗೆಗಳಿಗೆ ಬೀಗ ಹಾಕಿದ್ದೇವೆ.
         -ಇಮಾಮ್ ಸಾಹೇಬ್ ಮುಖ್ಯಾಧಿಕಾರಿಗಳು, ಪುರಸಭೆ, ಸಂಡೂರು

Related