ಆಮ್ಲಜನಕ ಘಟಕ ಉದ್ಘಾಟಿಸಿದ ಲಕ್ಷ್ಮಣ ಸವದಿ

ಆಮ್ಲಜನಕ ಘಟಕ ಉದ್ಘಾಟಿಸಿದ ಲಕ್ಷ್ಮಣ ಸವದಿ

ಅಥಣಿ : ಆಮ್ಲಜನಕದ ಕೊರತೆ ನೀಗಿಸಲು ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಆಮ್ಲಜನಕ ಉತ್ಪಾದನೆ ಘಟಕ ಉದ್ಘಾಟಿಸಿ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಇಡೀ ದೇಶದಲ್ಲಿಯೇ ಆಮ್ಲಜನಕದ ಕೊರತೆ ಇತ್ತು. ಹೀಗಾಗಿ ಸಾವಿರಾರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಇದೇ ಸ್ಥಿತಿ ಅಥಣಿಯಲ್ಲಿಯೂ ಸಹ ಉಂಟಾಗಿತ್ತು.

ಈ ಪರಿಸ್ಥಿತಿ ಇನ್ನು ಮುಂದಿನ ದಿನಗಳಲ್ಲಿ ಪುನರಾವರ್ತನೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಾಗಿದ್ದು, ಈ ಪೈಕಿ ಒಂದು ಘಟಕ ಸರ್ಕಾರದ ಅನುದಾನದಲ್ಲಿ ಮತ್ತೊಂದು ಘಟಕ ಬೆಂಗಳೂರಿನ ನನ್ನ ಸ್ನೇಹಿತರೊಬ್ಬರು ಕೊಟ್ಟ 60 ಲಕ್ಷ ರೂ. ದೇಣಿಗೆಯಲ್ಲಿ ನಿರ್ಮಿಸಲಾಗಿದೆ ಎಂದ ಅವರು ಈ ಘಟಕಗಳಿಂದ ದಿನನಿತ್ಯ 107 ಬೆಡ್‌ಗಳಿಗೆ ಆಮ್ಲಜನಕ ಪೂರೈಕೆ ಮಾಡಬಹುದು ಎಂದು ತಿಳಿಸಿದರು.

ಇತ್ತೀಚೆಗೆ ಸಕ್ಕರೆ ಹಾಗೂ ಇನ್ನಿತರ ಕಾಯಿಲೆಗಳ ಪರಿಣಾಮ ಕಿಡ್ನಿ ವೈಫಲ್ಯ ಉಂಟಾಗುತ್ತಿದ್ದು, ಇದರಿಂದ ಡಯಾಲಿಸಿಸ್ ಮಾಡಿಕೊಳ್ಳುವುದು ಅನಿವಾರ್ಯವಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಬಾರಿ ಡಯಾಲಿಸಿಸ್‌ಗೆ 1500 ರೂ. ಗಳಿಂದ 2000 ರೂ. ಗಳಷ್ಟು ಹಣ ಕಟ್ಟಬೇಕಾಗುತ್ತದೆ. ಇದು ಮಧ್ಯಮ ಹಾಗೂ ಬಡ ವರ್ಗದವರಿಗೆ ಕಷ್ಟದಾಯಕ. ಹೀಗಾಗಿಯೇ ಸರ್ಕಾರಿ ಆಸ್ಪತ್ರೆಯಲ್ಲಿಯೇ ಡಯಾಲಿಸಿಸ್ ಘಟಕ ಪ್ರಾರಂಭಿಸಲಾಗಿದ್ದು, ಬಡ ರೋಗಿಗಳು ಉಚಿತವಾಗಿ ಡಯಾಲಿಸಿಸ್ ಮಾಡಿಕೊಳ್ಳಬಹುದು ಎಂದು ಹೇಳಿದರು.

ಆರ್.ಎಸ್.ಎಸ್ ಕಾರ್ಯಕರ್ತರು ಉನ್ನತ ಹುದ್ದೆಗಳಿಗೆ ನೇಮಕವಾಗುತ್ತಿರುವುದು ಸಂತಸದ ಸಂಗತಿ. ಇದರಲ್ಲಿ ತಪ್ಪೇನಿದೆ. ದೇಶ ಭಕ್ತಿ ಹೊಂದಿರುವ ಆರ್.ಎಸ್.ಎಸ್ ಕಾರ್ಯಕರ್ತರು ಈ ಹುದ್ದೆಗಳಿಗೆ ನೇಮಕಾತಿಯಾಗುವುದರಿಂದ ಈ ದೇಶದ ಅಭಿವೃದ್ಧಿ ಇನ್ನಷ್ಟು ಹೆಚ್ಚಾಗಲಿದೆ. ಇತ್ತೀಚಿಗೆ ಮಾಜಿ ಕುಮಾರಸ್ವಾಮಿ ಆರ್‌ಎಸ್‌ಎಸ್ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಐಎಎಸ್, ಕೆಎಎಸ್, ಐಪಿಎಸ್ ಹಾಗೂ ಇನ್ನೂ ಅನೇಕ ಉನ್ನತ ಹುದ್ದೆಗಳಲ್ಲಿ ನೇಮಕಾತಿಯಾಗುತ್ತಿದ್ದಾರೆ ಎಂದು ಹೇಳಿಕೆ ಯಾವ ಕಾರಣಕ್ಕೆ ನೀಡಿದ್ದಾರೆ ಎನ್ನುವುದೇ ಅವರಲ್ಲಿಯೇ ಗೊಂದಲ ಮೂಡಿಸಿದೆ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಡಾ.ಸಿ.ಎಸ್ ಪಾಟೀಲ, ಡಾ. ಬಸಗೌಡಾ ಕಾಗೆ, ಡಾ. ಕನಮಡಿ, ಪ್ರಕಾಶ್ ನರೊಹಟ್ಟಿ ಪುರಸಭೆಯ ಬಿಜೆಪಿ ಮುಖಂಡ ಮಾರುತಿ ಅಸ್ಕಿ, ಶಿವರುದ್ರಪ್ಪ ಗುಳ್ಳಪನ್ನವರ, ಮಾಜಿ ಅಧ್ಯಕ್ಷ ದಿಲೀಪ ಲೋಣಾರೆ, ದತ್ತಾ ವಾಸ್ಟರ್, ಅರುಣ ಭಾಸಿಂಗಿ, ಪ್ರದೀಪ ನಂದಗಾAವ, ಮಲ್ಲೇಶ ಹುದ್ದಾರ, ಶ್ರೀಶೈಲ ನಾಯಿಕ, ವಿಶಾಲ ಸಗರಿ, ಶಿವಕುಮಾರ ಅಪರಾಜ, ಶಿವಾನಂದ ನಾಯಕ, ಸಂತೋಷ ಸಾವಡಕರ, ಅಜೀತ ಪವಾರ, ಸಂಗಮೇಶ ಪಲ್ಕಕಿ, ನಿಂಗಪ್ಪ ಕೋಕಲೆ, ಪುಟ್ಟು ಹೀರೆಮಠ, ಅನೇಕರು ಇನ್ನಿತರರಿದ್ದರು.

Related