ಹಿಂದೂ ಯುವತಿಯ ಅಪಹರಣ, ಬಲವಂತದಿಂದ ಮುಸ್ಲಿಂ ಯುವಕನೊಂದಿಗೆ ಮದುವೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಯುವತಿಯನ್ನು ಅಪಹರಣ ಮಾಡಿ ಬಲವಂತದಿಂದ ಇಸ್ಲಾಂಗೆ ಮತಾಂತರ ಮಾಡಿ ಬಳಿಕ ಆಕೆಯನ್ನು ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಿಸಲಾಗಿದೆ ಎಂದು ವರದಿಯಾಗಿದೆ.

ಸಂತ್ರಸ್ತ ಹಿಂದೂ ಯುವತಿ ಕರೀನಾಳನ್ನು ಮತಾಂತರಗೊಳಿಸಿ ಖಲಿಲ್ ರೆಹಮಾನ್ ಜೊನೊ ಎಂಬ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲಾಗಿದೆ. ಖಲಿಲ್ ಪಾಕಿಸ್ತಾನದ ಮೀರ್ ಮೊಹಮ್ಮದ್ ಜೊನೊ ಹಳ್ಳಿಯ ನಿವಾಸಿ. ಈತ ಖಾಜಿ ಅಹ್ಮದ್ ನಗರದ ಉನ್ನರ್ ಮುಹಲ್ಲಾದಿಂದ ಯುವತಿಯನ್ನು ಅಪಹರಿಸಿ ಮತಾಂತರಗೊಳಿಸಿ, ಬಳಿಕ ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಯುವತಿ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಸೆಕ್ಷನ್ 365-ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಯುವಕ ಖಲೀಲ್ ಹಾಗೂ ಅವನ ತಂದೆ ಅಸ್ಗರ್ ಜೋನೋ ಇಬ್ಬರನ್ನೂ ಬಂಧಿಸಲಾಗಿದೆ. ಈ ಘಟನೆಗೆ ದೇಶದ ವಿವಿಧ ಮಾನವ ಹಕ್ಕು ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವೆಡೆ ಹಿಂದೂಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಹಿಂದೂ ಪಂಚಾಯತ್ ನಾಯಕ ಮನೋಮಾಲ್, ಹಿಂದೂ ಯುವತಿಗೆ ಪ್ರಾಣ ಬೆದರಿಕೆಯೊಡ್ಡಿ ಬಲವಂತದಿಂದ ಮತಾಂತರ ಮಾಡಲಾಗಿದೆ. ಪಾಕಿಸ್ತಾನದಲ್ಲಿ ಹಿಂದೂ ಸಮುದಾಯ ಆತಂಕದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಬಲವಂತದ ಮತಾಂತರ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸ್ ಇಲಾಖೆ ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಕೋರಿದ್ದಾರೆ.

ಈ ವರ್ಷದ ಆರಂಭದಲ್ಲಿಯೂ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತನ್ನ ಮನೆಯಲ್ಲೇ ಹಿಂದೂ ಯುವತಿ ಪೂಜಾ ಕುಮಾರಿಯನ್ನು ಮುಸ್ಲಿಂ ವ್ಯಕ್ತಿಯೊಬ್ಬ ಗುಂಡುಹಾರಿಸಿ ಹತ್ಯೆಮಾಡಿದ್ದನು ಎಂದು ಹೇಳಲಾಗಿದೆ.

 

Related