ಕಾರ್ತಿಕ ಮಹೋತ್ಸವ ಕಾರ್ಯಕ್ರಮ

ಕಾರ್ತಿಕ ಮಹೋತ್ಸವ ಕಾರ್ಯಕ್ರಮ

ಹೊಸಕೋಟೆ: ಮಾಸಗಳಲ್ಲೆ ಕಾರ್ತಿಕ ಮಾಸ ಶ್ರೇಷ್ಟವಾದದ್ದು, ಹಿಂದೂ ಧರ್ಮದಲ್ಲಿ ದೇವರ ಆರಾಧನೆಗೆ ವಿಶಿಷ್ಟ ಪರಂಪರೆಯಿದೆ. ಸಂತೋಷವನ್ನು ನಾಲ್ಕೂ  ಜನರಿಗೆ ಹಂಚುವುದೇ ದೇವರ ಪೂಜೆಯಾಗಿದೆ. ಎಲ್ಲರೂ ಒಟ್ಟಾಗಿ ಸೇರುವುದೆ ಏಕತೆಯ ಸಂಕೇತವಾಗಿದೆ ಎಂದು ಪ್ರಧಾನ ಅರ್ಚಕ ವಿದ್ಯಾ ಸಾಗರ್ ತಿಳಿಸಿದ್ದಾರೆ.
ಹೊಸಕೋಟೆ ತಾಲೂಕಿನ ಚೊಕ್ಕಹಳ್ಳಿಯ ಸುಪ್ರಸಿದ್ಧ ಶ್ರೀವೀರಭದ್ರೇಶ್ವರಸ್ವಾಮಿ, ಶ್ರೀಬಸವೇಶ್ವರ ಹಾಗೂ ಶ್ರೀವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಸೋಮವಾರ ರಾತ್ರಿ ನಡೆದ ಕಾರ್ತಿಕ ಮಾಸದ ೪ನೇ ವರ್ಷದ ಮಹೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಕಾರ್ತಿಕ ಮಾಸದ ಹುಣ್ಣಿಮೆ ಪ್ರಯುಕ್ತವಾಗಿ ಮಹಾಗಣಪತಿ ಹೋಮ, ಫಲ, ಪಂಚಾಮೃತ ಹಾಗೂ ರುದ್ರಾಭಿಷೇಕ, ಬಿಲ್ವಾರ್ಚನೆ ಇತರೆ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಶ್ರದ್ಧಾ ಭಕ್ತಿಯ ನಡುವೆ ನಡೆಯಿತು.
ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀ ವೀರಭದ್ರಸ್ವಾಮಿ, ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಓಂಶಕ್ತಿದೇವಿಯ ಉತ್ಸವ ಮೂರ್ತಿಗಳ ಮೆರವಣಿಗೆಯನ್ನು ವೀರಗಾಸೆ ನೃತ್ಯ, ಮಂಗಳ ವಾದ್ಯಗಳ ನಿನಾದದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಭಕ್ತಾಧಿಗಳಿಂದ ಪೂಜೆ ಸ್ವೀಕರಿಸಿದವು.
ದೇವಾಲಯದ ಎಲ್ಲೆಡೆ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಆಲಂಕೃತಗೊಳಿಸಲಾಗಿತ್ತು. ಸುತ್ತಮುತ್ತಲ ಗ್ರಾಮಗಳಿಂದ ಭಕ್ತರ ದಂಡು ಸಾಲುಗಟ್ಟಿ ನಿಂತು ದೇವತಾ ಕಾರ್ಯದಲ್ಲಿ ಪಾಲ್ಗೊಂಡು, ದೀಪಗಳನ್ನು ಹಚ್ಚುವ ಮೂಲಕ ಲಕ್ಷ ದೀಪೋತ್ಸವಕ್ಕೆ ಮೆರುಗು ನೀಡಿದರು. ಬಾಣ-ಬಿರುಸುಗಳನ್ನು ಸುಡುವ ಮೂಲಕ ನೋಡುಗರ ಮನದಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತಿತ್ತು.
ನಂತರ ಮಹಾ ಮಂಗಳಾರತಿ, ತೀರ್ಥ, ಪ್ರಸಾದ ಹಾಗೂ ಅನ್ನಸಂತರ್ಪಣೆ ವಿನಿಯೋಗ ನಡೆಸಿದರು. ಕಾರ್ಯಕ್ರಮದ ನೇತೃತ್ವವನ್ನು ಗ್ರಾಮದ ಎಲ್ಲ ಮುಖಂಡರು ಹಾಗೂ ಗ್ರಾಮಸ್ಥರು ವಹಿಸಿದ್ದರು.

Related