ಅವರ ನುಡಿಮುತ್ತು ಮರೆಮಾಚಲು ನನ್ನ ಮೇಲೆ ಆರೋಪ: ಡಿಸಿಎಂ

ಅವರ ನುಡಿಮುತ್ತು ಮರೆಮಾಚಲು ನನ್ನ ಮೇಲೆ ಆರೋಪ: ಡಿಸಿಎಂ

ಬೆಂಗಳೂರು: ನಾನು ಕುಮಾರಸ್ವಾಮಿ ಅವರಿಗೆ ವೈಯಕ್ತಿಕವಾಗಿ ಗೌರವ ನೀಡುತ್ತೇನೆ. ಈಗಲೂ ನೀಡುತ್ತಿದ್ದೇನೆ, ಮುಂದೆಯೂ ನೀಡುತ್ತೇನೆ. ಅವರು ನನಗೆ ಗೌರವ ಕೊಟ್ಟರೆ, ನಾನು ಅದೇ ಗೌರವ ಕೊಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಕುಮಾರಸ್ವಾಮಿ ಅವರಿಗೆ ಗೌರವ ನೀಡುತ್ತಿದ್ದರೂ ಅವರು ಪದೇ ಪದೆ ನನ್ನ ಬಗ್ಗೆ ವೈಯಕ್ತಿಕ ವಿಚಾರವಾಗಿ ಬಂಡೆ ಒಡೆದ, ವಿಷ ಹಾಕಿದ, ಹೆಣ್ಣು ಮಕ್ಕಳ ಕೈಯಿಂದ ಜಮೀನು ಬರೆಸಿಕೊಂಡಿದ್ದೇನೆ ಎಂದು ಆಧಾರರಹಿತ ಟೀಕೆ ಮಾಡುತ್ತಿದ್ದಾರೆ. ನಾನು ಒಂದು ಕಾಲದಲ್ಲಿ ಬಂಡೆ ಒಡೆದಿದ್ದರೆ, ನನ್ನ ಜಮೀನಿನ ಬಂಡೆಯನ್ನು ಕಾನೂನುಬದ್ಧವಾಗಿ ಒಡೆದಿದ್ದೇನೆ. ನಾವು ಹಿರಿಯರಿಗೆ ಗೌರವ ನೀಡುವುದೇ ಅವರಿಂದಲೂ ಅದನ್ನು ಸ್ವೀಕರಿಸಲು. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಚುನಾವಣೆ ನಂತರ ಅವರ ಪಕ್ಷ ಯಾವ ಸ್ಥಿತಿಗೆ ತಲುಪಲಿದೆ ಕಾದು ನೋಡಿ. ಸಮುದಾಯಕ್ಕಾಗಿ ನಾನು ಅವರಿಗೆ ಗೌರವ ಕೊಟ್ಟು ಅವರು ಏನೇ ಅಂದರೂ ಸಹಿಸಿಕೊಂಡಿದ್ದೇನೆ. ಅವರು ಸವಾಲು ಸ್ವೀಕರಿಸಿದ್ದರೆ ಚುನಾವಣೆ ನಂತರ ಅಧಿವೇಶನದಲ್ಲಿ ಮಾತನಾಡೋಣ ಎಂದು ತಿಳಿಸಿದರು.

ನಾವು ನೀರಿನ ಕಷ್ಟಕಾಲದಲ್ಲೂ ಬೆಂಗಳೂರಿನ ಎಲ್ಲಾ ಜನರಿಗೂ ಕುಡಿಯಲು ನೀರು ಪೂರೈಸುತ್ತಿದ್ದೇವೆ. ಕುಮಾರಸ್ವಾಮಿ ಅವರು ತಮ್ಮ ನುಡಿಮುತ್ತುಗಳನ್ನು ಮರೆ ಮಾಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಮಾಧ್ಯಮಗಳಲ್ಲಿ ಬೇರೆ ಬೇರೆ ಆಯಾಮಗಳಲ್ಲಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರಿಗೆ ಆ ರೀತಿ ಮಾತನಾಡಿ ಎಂದು ಹೇಳಿದವರು ಯಾರು. ನಾನು ಆ ವಿಚಾರ ಬಿಡುತ್ತೇನೆ. ಆದರೆ ಅವರ ಮಾತುಗಳಿಂದ ಮಹಿಳೆಯರಿಗೆ ಆಗಿರುವ ಅಪಮಾನವನ್ನು ಅವರ ಮನಸ್ಸಿನಿಂದ ತೆಗೆಯಲು ಆಗುವುದಿಲ್ಲಎಂದರು.

 

Related