ಕೊಳ್ಳೆ ಹೊಡೆದ ಮೇಲೆ ಎಚ್ಚೆತ್ತ ಸರ್ಕಾರ

ಕೊಳ್ಳೆ ಹೊಡೆದ ಮೇಲೆ ಎಚ್ಚೆತ್ತ ಸರ್ಕಾರ

ಬೆಂಗಳೂರು :  ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ ರಾಜ್ಯದಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡಿದ ನಂತರ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಕೆ. ಕುಮಾರಸ್ವಾಮಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರ ಎರಡು ತಿಂಗಳು ತಡವಾಗಿಯಾದರೂ ಎಚ್ಚೆತ್ತುಕೊಂಡಿದೆ. ರಾಜ್ಯ ಸರ್ಕಾರದ ಬೇಜವಾಬ್ದಾರಿತನದ ನೀತಿಯಿಂದ ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗಿದೆ. ಇದಕ್ಕೆ ರಾಜ್ಯ ಸರ್ಕಾರವೇ ಹೊಣೆಯೇ ಹೊರತು, ಜನಸಾಮಾನ್ಯರಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ತನ್ನ ಬೇಜಾಬ್ದಾರಿ ನೀತಿಯನ್ನು ಬಿಟ್ಟು ಜನಸಾಮಾನ್ಯರ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು. ಸರ್ಕಾರಿ ಕಚೇರಿಗಳಿಗೆ ಶನಿವಾರ ರಜೆ ಘೋಷಣೆ, ಭಾನುವಾರ ಲಾಕ್ ಡೌನ್ ಹಾಗೂ ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದು ಸರಿಯಾಗಿದೆ. ಆದರೆ ಈ ಕಾರ್ಯ ಇನ್ನೂ ಮುಂಚೆಯೇ ಮಾಡಬೇಕಿತ್ತು ಎಂದರು.

ಕೋವಿಡ್ ಆರ್ಭಟದ ನಡುವೆಯೂ ಮಲೆನಾಡು ಭಾಗದಲ್ಲಿ ರೆಸಾರ್ಟ್ಸ್ ಪ್ರಾರಂಭವಾಗಿವೆ. ರೋಗ ನಿಯಂತ್ರಣಕ್ಕೆ ಬರುವವರೆಗೂ ರೆಸಾರ್ಟ್ಸ್ ಮತ್ತು ಹೋಂಸ್ಟೇಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಹೆಚ್ಚಳದ ಬಗ್ಗೆ ಸರ್ಕಾರ ದಿವ್ಯ ಮೌನ ವಹಿಸಿದೆ. ದರ ಹೆಚ್ಚಳದ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಜನಸಾಮಾನ್ಯರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎಂಬುದನ್ನು ತೋರಿಸಿದಂತಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

Related