ಮೊದಲ ನಾಗರಿಕ ವಿಮಾನ ಶಿವಮೊಗ್ಗದಲ್ಲಿ ಭೂಸ್ಪರ್ಶ

  • In State
  • August 31, 2023
  • 162 Views
ಮೊದಲ ನಾಗರಿಕ ವಿಮಾನ ಶಿವಮೊಗ್ಗದಲ್ಲಿ ಭೂಸ್ಪರ್ಶ

ಶಿವಮೊಗ್ಗ: ಮಲೆನಾಡಿನ ಹಸುರಿನ ಮಧ್ಯದಲ್ಲಿ ಲೋಹದ ಹಕ್ಕಿ ಹಾರಾಡಲು ಇಂದಿನಿಂದ ಪ್ರಾರಂಭವಾಗಿದೆ. ಮಲೆನಾಡಿಗರ ಹಲವು ವರ್ಷಗಳ ಲೋಹದ ಹಕ್ಕಿಯ ಕನಸು, ನನಸಾಗಿದ್ದು, ಬೆಂಗಳೂರಿನಿಂದ ಆಗಮಿಸಿದ ಮೊದಲ ನಾಗರಿಕ ವಿಮಾನ ಗುರುವಾರ ಶಿವಮೊಗ್ಗದಲ್ಲಿ ಭೂಸ್ಪರ್ಶ ಮಾಡಿತು. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ಬಾರಿಗೆ ನಾಗರಿಕರನ್ನು ಹೊತ್ತ ಇಂಡಿಗೋ ವಿಮಾನ ಆಗಮಿಸಿದ್ದು, ವಿಮಾನ ಮತ್ತು ಪ್ರಯಾಣಿಕರಿಗೆ ಏರ್‌ಪೋರ್ಟ್‌ನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ಶಿವಮೊಗ್ಗ ಏರ್‌ಪೋರ್ಟ್‌ಗೆ ಆಗಮಿಸಿದ ಮೊದಲ ವಿಮಾನಕ್ಕೆ ಎರಡು ಫೈರ್‌ ಇಂಜಿನ್‌ ವಾಹನಗಳಿಂದ ವಾಟರ್‌ ಸೆಲ್ಯೂಟ್‌ ಮಾಡಿ ಸ್ವಾಗತಿಸಲಾಯಿತು.

ಬೆಳಗ್ಗೆ 9.50ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು 10:45ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಮೊದಲ ವಿಮಾನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಶಾಸಕರಾದ ಆರಗ ಜ್ಞಾನೇಂದ್ರ, ವಿಜಯೇಂದ್ರ, ಬೇಳೂರು ಗೋಪಾಲಕೃಷ್ಣ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಪ್ರಯಾಣ ಬೆಳೆಸಿದ್ದಾರೆ.

ಇದು ರಾಜ್ಯದ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಪ್ರಪ್ರಥಮ ವಿಮಾನ ನಿಲ್ದಾಣವಾಗಿದ್ದು, ಇದಕ್ಕೆ 450 ಕೋಟಿ ರೂ. ವಿನಿಯೋಗಿಸಲಾಗಿದೆ. ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆ ಎಂಬಲ್ಲಿ 779 ಎಕರೆ ಜಾಗದಲ್ಲಿ ಏರ್‌ಪೋರ್ಟ್‌ ಮೈದಾಳಿದ್ದು ಇದರಲ್ಲಿ ಏರ್‌ಬಸ್ ಮಾದರಿಯ ವಿಮಾನಗಳೂ ಬಂದಿಳಿಯುವ ಅನುಕೂಲಗಳನ್ನು ಕಲ್ಪಿಸಲಾಗಿದೆ. ಇದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದೆ.

Related