ಅಣ್ಣಾವ್ರ 91ನೇ ಜನ್ಮದಿನ ; ಮನೆಯಲ್ಲೇ ಸಂಭ್ರಮಿಸಿದ ಅಭಿಮಾನಿಗಳು

ಅಣ್ಣಾವ್ರ 91ನೇ ಜನ್ಮದಿನ ; ಮನೆಯಲ್ಲೇ ಸಂಭ್ರಮಿಸಿದ ಅಭಿಮಾನಿಗಳು

ಏಪ್ರಿಲ್ 24 ಕನ್ನಡಿಗರಿಗೆ ವಿಶೇಷವಾದ ದಿನ. ಅದರಲ್ಲೂ ಡಾ.ರಾಜ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ. ಹೌದು. ಇಂದು ವರನಟ, ನಟಸಾರ್ವಭೌಮ ಡಾ.ರಾಜ್‍ಕುಮಾರ್ ಹುಟ್ಟಿದ ದಿನ. ಅಭಿಮಾನಿಗಳು 91ನೇ ವರ್ಷದ ಜನ್ಮದಿನಾಚರಣೆಯ ಸಡಗರದಲ್ಲಿದ್ದಾರೆ.

ಪ್ರತೀವರ್ಷ ರಾಜ್‍ಕುಮಾರ್ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಅಭಿಮಾನಿಗಳು ಕಂಠೀರವ ಸ್ಟುಡಿಯೋದ ರಾಜ್‍ಕುಮಾರ್ ಸ್ಮಾರಕದ ಬಳಿ ಬಂದು ಜಮಾಯಿಸುತ್ತಿದ್ದರು. ಡಾ.ರಾಜ್ ಸಮಾಧಿಗೆ ಪೂಜೆ ಸಲ್ಲಿಸಿ ವರನಟನನ್ನು ನೆನೆದು ಧನ್ಯರಾಗುತ್ತಿದ್ದರು. ಆದರೆ ಕೊರೊನಾ ಹಾವಳಿಯ ಪರಿಣಾಮ ಮೊದಲ ಬಾರಿಗೆ ರಾಜ್‍ ಉತ್ಸವ ಮಿಸ್‍ ಆಗುತ್ತಿದೆ. ಆದರೂ ಡಾ. ರಾಜ್ ಅಭಿಮಾನಿಗಳು ಮನೆಯಲ್ಲಿಯೇ ಸಂಭ್ರಮಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಅದೆಷ್ಟೊ ಹೀರೋಗಳು ಬಂದು ತೆರೆಮರೆಗೆ ಸರಿದಿದ್ದಾರೆ. ಆದರೆ, ಕನ್ನಡಕ್ಕೊಬ್ಬರೇ ರಾಜ್‍ಕುಮಾರ್ ಎಂಬ ಮಾತಿನಂತೆ ಡಾ. ರಾಜ್‍ಕುಮಾರ್ ಅವರನ್ನು ಮೀರಿಸುವ ನಟನಾ ಸಾಮಥ್ರ್ಯವುಳ್ಳ ಕನ್ನಡಪರ ಕಾಳಜಿಯುಳ್ಳ ಮತ್ತೋರ್ವ ನಾಯಕನಟ ಇದುವರೆಗೂ ಬಂದಿಲ್ಲ.

ಐತಿಹಾಸಿಕ, ಪೌರಾಣಿಕ, ಕೌಟುಂಬಿಕ, ಆ್ಯಕ್ಷನ್, ಕಾಮಿಡಿ, ಥ್ರಿಲ್ಲರ್, ಕಲಾತ್ಮಕ ಹೀಗೆ ಎಲ್ಲ ಪ್ರಕಾರಗಳ ಸಿನಿಮಾಗಳಲ್ಲೂ ಅಭಿನಯಿಸುವ ಮೂಲಕ ಸೈ ಎನಿಸಿಕೊಂಡ ರಾಜ್ ಕುಮಾರ್ ನಟಸಾರ್ವಭೌಮ ಎಂದು ಬಿರುದು ಪಡೆದರು. ಆದರೆ ಇಂದಿಗೂ ಅಭಿಮಾನಿಗಳ ಮನದಲ್ಲಿ ಅಣ್ಣಾವ್ರು ಎಂದೇ ಉಳಿದುಕೊಂಡಿದ್ದಾರೆ.

ಇನ್ನೂ ಪ್ರತೀವರ್ಷ ರಾಜ್‍ಕುಮಾರ್‍  ಕುಟುಂಬ ಸಮಾಧಿ ಬಳಿ ಹೋಗಿ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ  ಶಿವಣ್ಣ ಹೋಗಿದ್ದು, ಪೂಜೆ ಮಾಡಿ ಅಪ್ಪಾಜಿ ಹುಟ್ಟುಹಬ್ಬ ಆಚರಿಸಿದ್ದಾರೆ.

ವರನಟನಿಗೆ ಸಾಕಷ್ಟು ನಟ-ನಟಿಯರು ತಮ್ಮ ಟ್ವೀಟರ್  ಖಾತೆಯ ಮೂಲಕ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ , ಶಿವಣ್ಣ, ರಾಘಣ್ಣ, ಪುನೀತ್, ಕಿಚ್ಚ ಸುದೀಪ್, ದರ್ಶನ್, ನವರಸ ನಾಯಕ ಜಗ್ಗೇಶ್, ದುನಿಯಾ ವಿಜಿ, ತರುಣ್ ಸುಧೀರ್, ಹೀಗೆ ಸಾಕಷ್ಟು ಕಲಾವಿದರು ಅಪ್ಪಾಜಿಗೆ ವಿಶ್ ಮಾಡಿದ್ದಾರೆ.

Related