ಗೈರು ಹಾಜರಾದವರಿಗೆ ಶಿಸ್ತು ಕ್ರಮ

ಗೈರು ಹಾಜರಾದವರಿಗೆ ಶಿಸ್ತು ಕ್ರಮ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕ್ಕೊಂಡಿರುವ ತರಬೇತಿಗೆ ಗೈರು ಹಾಜರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆ ಅಧಿಕಾರಿಗಳಾದ ಪ್ರಿಸೈಡಿಂಗ್ ಆಫೀಸರ್ ಹಾಗೂ ಅಸಿಸ್ಟಂಟ್ ಪ್ರಿಸೈಂಡಿಗ್ ಆಫೀಸರ್ ಗಳಿಗೆ ಇಂದು 2ನೇ ತರಬೇತಿ ನಡೆಯುತ್ತಿರುವ 3 ಸ್ಥಳಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಮತದಾನದ ದಿನ ಮತಗಟ್ಟೆಗಳ ಬಳಿ ನಡೆಯುವ ಎಲ್ಲಾ ಚಟುವಟಿಕೆಗಳ ಕುರಿತು ಮಾಸ್ಟರ್ ಟ್ರೈನರ್ ಗಳು ತರಬೇತಿಯಲ್ಲಿ ನೀಡುವ ಮಾಹಿತಿಯನ್ನು ಸರಿಯಾಗಿ ಅರಿತುಕೊಳ್ಳಬೇಕೆಂದು ತಿಳಿಸಿದರು.

ಮತದಾನದ ದಿನ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಸಮಯದಲ್ಲಿ ವಿವಿ ಪ್ಯಾಟ್, ಕಂಟ್ರೋಲ್ ಯುನಿಟ್ ಹಾಗೂ ಬ್ಯಾಲೆಟ್ ಯೂನಿಟ್ ಹೇಗೆ ಕಾರ್ಯನಿರ್ವಹಿಸಲಿದೆ, ಯಾವ ರೀತಿ ಕನೆಕ್ಷನ್ ನೀಡಬೇಕು ಎಂಬುದನ್ನು ಸರಿಯಾಗಿ ನೋಡಿಕೋಳ್ಳಬೇಕೆಂದು ಸೂಚನೆ ನೀಡಿದರು.

ಮತದಾನದ ಕುರಿತು ಹೆಚ್ಚು ಮಾಹಿತಿಗಾಗಿ ಮತಗಟ್ಟೆ ಕೈಪಿಡಿಯನ್ನು ನೀಡಲಾಗಿದೆ. ಮತಗಟ್ಟೆ ಅಧಿಕಾರಿಗಳ ಕೈಪಿಡಿಯು ಭಾರತ ಚುನಾವಣಾ ಅಯೋಗ ಹಾಗೂ ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್ ನಲ್ಲೂ ಲಭ್ಯವಿದ್ದು, ಅಲ್ಲಿಯೂ ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.

ಎಲ್ಲಾ ಮತಗಟ್ಟೆಯ ಪ್ರಿಸೈಡಿಂಗ್ ಆಫೀಸರ್ ಹಾಗೂ ಅಸಿಸ್ಟಂಟ್ ಪ್ರಿಸೈಂಡಿಗ್ ಆಫೀಸರ್ ಗಳು ತಪ್ಪದೆ ತರಬೇತಿಗೆ ಹಾಜರಾಗಬೇಕು. ಗೈರು ಹಾಜರಾದ ಅಧಿಕಾರಿ/ಸಿಬ್ಬಂದಿಗಳ ಮೇಲೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 134ರಂತೆ ಶಿಸ್ತು ಕ್ರಮ ಜರುಗಿಸಲು ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಚಿಸಲಾಯಿತು.

 

Related