ಪಿಯು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಪೊಲೀಸರು

ಪಿಯು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ಪೊಲೀಸರು

ಮಂಗಳೂರು : ಕಿರುಕುಳ ಪ್ರಕರಣದಲ್ಲಿ ದೂರು ಕೊಡಲು ಹೋಗಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆಯೇ ಬಜ್ಪೆ ಠಾಣೆಯ ಪೊಲೀಸರು ಬಾಸುಂಡೆ ಬರುವಂತೆ ಹೊಡೆದು ಹಲ್ಲೆಗೈದಿರುವ ಆರೋಪ ಕೇಳಿಬಂದಿದ್ದು, ಮೂವರು ಪೊಲೀಸ್ ಪೇದೆಗಳ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಂಗಳೂರು ಹೊರವಲಯದ ಗಂಜಿಮಠದ ಪರಿಸರದ ಪಿಯುಸಿ ವಿದ್ಯಾರ್ಥಿನಿ ಹಲ್ಲೆಗೊಳಗಾದ ಯುವತಿಯಾಗಿದ್ದು, ಕೈ, ಕಾಲಿಗೆ ತೀವ್ರ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯಾರ್ಥಿನಿಗೆ ಎಡಪದವು ಬಳಿಯ ಇರುವೈಲು ನಿವಾಸಿ ಶ್ರೀಕಾಂತ್ ನಾಗೇಶ್ ಎಂಬ ಯುವಕನ ಜೊತೆಗೆ ಫೇಸ್ಬುಕ್‌ನಲ್ಲಿ ಪರಿಚಯ ಆಗಿತ್ತು. ಈ ಪರಿಚಯ ಪ್ರೇಮಕ್ಕೆ ತಿರುಗಿ, ಯುವಕ ನಾಗೇಶ್ ಯುವತಿಯ ಮನೆಗೆ ಬಂದು ಕಿರುಕುಳ ನೀಡಿದ್ದಾನೆ. ಮದುವೆ ಮಾಡಿಕೊಡುವಂತೆ ಒತ್ತಾಯ ಮಾಡಿದ್ದು, ಯುವತಿ ಅಪ್ರಾಪ್ತಳಾಗಿದ್ದರಿಂದ ಹೆತ್ತವರು ನಿರಾಕರಿಸಿದ್ದರು.

ಈ ನಡುವೆ ಬೇರೆ ಯುವಕರನ್ನು ಕಟ್ಟಿಕೊಂಡು ಯುವತಿಯ ಮನೆಗೆ ಬಂದಿದ್ದ ಯುವಕ ನಾಗೇಶ್, ಮದುವೆ ಮಾಡಿಕೊಡದಿದ್ದರೆ ನಿಮ್ಮ ಮನೆಯನ್ನು ಧ್ವಂಸ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದ್ದು ಯುವತಿಯ ತಂದೆ ಈ ಬಗ್ಗೆ ಬಜ್ಪೆ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಯುವತಿಯ ತಂದೆ ಜೆರಾಲ್ಡ್ ಮ್ಯಾಕ್ಸಿಂ ಪಿಂಟೋ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Related