ಯುವನಿಧಿ ಯೋಜನೆಗೆ ಸಿಎಂ ಚಾಲನೆ

ಯುವನಿಧಿ ಯೋಜನೆಗೆ ಸಿಎಂ ಚಾಲನೆ

ಶಿವಮೊಗ್ಗ: ಕಾಂಗ್ರೆಸ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಇಂದು ಶಿವಮೊಗ್ಗ ನಗರದಲ್ಲಿ ಚಾಲನೆ ನೀಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿರುವ ನಿರುದ್ಯೋಗ ಯುವಕ ಯುವತಿಯರಿಗೆ ಇಂದಿನಿಂದ ಪ್ರತಿ ತಿಂಗಳು ಪದವೀಧರರಿಗೆ 3000 ಮತ್ತು ಡಿಪ್ಲೋಮಾ ಮುಗಿಸಿದವರಿಗೆ 1500 ಸಾವಿರ ನೇರ ಅವರ ಖಾತೆಗೆ ಹಣ ಜಮಾ ಆಗಲಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.

ಯುವ ನಿಧಿ ಯೋಜನೆಗೂ ಚಾಲನೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದಂತಾಗಿದೆ.

ಚಿತ್ರದುರ್ಗ, ಹಾವೇರಿ, ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕನ್ನಡ ಸೇರಿದಂತೆ ಬೇರೆ ಬೆರೆ ಜಿಲ್ಲೆಗಳಿಂದ ಆಗಮಿಸಿದ ಲಕ್ಷಾಂತರ ಜನ ಯುವ ನಿಧಿ ಯೋಜನೆಗೆ ಚಾಲನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಚುನಾವಣೆಗಾಗಿ ಯುವನಿಧಿ ಯೋಜನೆಯನ್ನು ಜಾರಿಗೆ ತಂದಿಲ್ಲ. ನಿರುದ್ಯೋಗಿ ಯುವಕರಿಗೆ ನೆರವಾಗಬೇಕೆಂಬ ಉದ್ದೇಶದಿಂದಷ್ಟೇ ಈ ಯೋಜನೆ ಜಾರಿಗೊಳಿಸಲಾಗಿದೆ. ದೇಶದಲ್ಲಿ ದಿನಬಳಕೆ, ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದೆ. ಜನಸಮಾನ್ಯರಿಗೆ ಖರೀದಿಸುವ ಸಾಮರ್ಥ್ಯವಿಲ್ಲ ಎಂದು ಹೇಳಿದರು.

ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಯುವ ನಿಧಿಗೆ ಚಾಲನೆ ನೀಡಲಾಗಿದೆ. ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ ಎನ್ನುವ ಮೂಲಕ ಚುನಾವಣೆ ಎದುರಿಸಲು ಕಾಂಗ್ರೆಸ್ ಈ ಮೂಲಕ ಸಿದ್ಧತೆ ಮಾಡಿಕೊಂಡಿದೆ.

2022-23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮಾ ತೇರ್ಗಡೆ ಹೊಂದಿದ ನಿರುದ್ಯೋಗಿಗಳು ಯೋಜನೆಗೆ ಅರ್ಹರಾಗಿದ್ದು, ಒಟ್ಟು 5.29 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಲಭ್ಯವಾಗಲಿದೆ. ಆನ್‌ಲೈನ್ ಮೂಲಕ ಈವರೆಗೆ 65 ಸಾವಿರಕ್ಕೂ ಹೆಚ್ಚು ಪದವಿ ಹಾಗೂ ಡಿಪ್ಲೊಮಾ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿದಂತೆ ವಿವಿಧ ಸಚಿವರು, ಪಕ್ಷದ ನಾಯಕರು ಸಮಾರಂಭದಲ್ಲಿ ಹಾಜರಿದ್ದರು.

Related