ನಾಡು ನುಡಿ ನಿರ್ಲಕ್ಷ್ಯಕ್ಕೆ ಬೇಸರ

ನಾಡು ನುಡಿ ನಿರ್ಲಕ್ಷ್ಯಕ್ಕೆ ಬೇಸರ

ಕೋಲಾರ: ಡಿ. 5 ರಂದು ಕರೆ ನೀಡಿರುವ ಬಂದ್‌ಗೆ ಸಂಬಂಧಿಸಿದಂತೆ ಇದೇ ತಿಂಗಳು ೩ ರಂದು ಬೆಂಗಳೂರಿನ ಕಚೇರಿಯಲ್ಲಿ ಸಂಘಟನೆಯ ಪದಾಧಿಕಾರಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳಲಾಗುತ್ತದೆ. ಬಂದ್‌ಗೆ ಬೆಂಬಲ ನೀಡಿದ್ದಿದ್ದ ಪಕ್ಷದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ನಾಡು ನುಡಿಯ ರಕ್ಷಣೆ ಅಗುತ್ತಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಕರವೇ ಜಿಲ್ಲಾ ಘಟಕದ ವತಿಯಿಂದ ನಗರದ ಡೂಂಲೈಟ್ ವೃತ್ತದಲ್ಲಿರುವ ಕೆಇಬಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಿರುವುದು ಮರಾಠದ ೩೨ ಭಾಷಿಗರಲ್ಲಿ ಯಾವ ಭಾಷಿಗರಿಗೆ ಇದರ ಸೌಲಭ್ಯ ಸಿಗಲಿದೆ ಎಂಬುದನ್ನು ಖಾತರಿಪಡಿಸಬೇಕು. ಅದರ ಬದಲಾಗಿ ಕರ್ನಾಟಕ ಮರಾಠ ಪ್ರಾಧಿಕಾರ ರಚಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಸಲಹೆ ನೀಡಿದರು.
ಬೆಂಗಳೂರಿನಲ್ಲಿ ಶೇ.27 ರಷ್ಟು ಕನ್ನಡಿಗರಿದ್ದು, ಮುಂದಿನ ದಿನಗಳಲ್ಲಿ ಅವರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಅವರು, ಮೊದಲು ಶಿವಸೇನೆ, ಎಂ.ಇ.ಎಸ್ ಪುಂಡಾಟಿಕೆಗೆ ಕಡಿವಾಣ ಹಾಕಲಿ. ಅಣ್ಣತಮ್ಮಂದಿರಂತಿರುವ ಮರಾಠಿಗರ ಕನ್ನಡಿಗರ ಮಧ್ಯೆ ಸಾಮರಸ್ಯವನ್ನು ಬೆಳೆಸುವ ಕೆಲಸವನ್ನು ಮಾಡಲಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಇಂಚರಗೋವಿಂದರಾಜು ಮಾತನಾಡಿ, ಕನ್ನಡದ ಮಣ್ಣಿನ ಸೊಗಡನ್ನು ಉಳಿಸಿ ಬೆಳೆಸಬೇಕಾಗಿದೆ. ಕನ್ನಡ ನಾಡು ನುಡಿಯ ರಕ್ಷಣೆಗೆ ನಾವೆಲ್ಲಾ ಮುಂದಾಗಬೇಕೆಂದ ಅವರು, ಕನ್ನಡ ನಾಡು ನುಡಿಗೆ ಧಕ್ಕೆಯಾದಾಗ ನಾವೆಲ್ಲ ಒಗ್ಗಟ್ಟಿನಿಂದ ಹೋರಡಬೇಕಾಗಿದೆ ಎಂದರು.
ಕರವೇ ರಾಜ್ಯ ಉಪಾಧ್ಯಕ್ಷ ಶಿವರಾಜ್‌ಗೌಡ, ಶಾಸಕ ಕೆ.ಶ್ರೀನಿವಾಸಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳಿಗೌಡ, ರಾಜ್ಯ ಸಂಚಾಲಕ ಲೋಕೇಶ್, ಜಿಲ್ಲಾ ಗೌರವಾಧ್ಯಕ್ಷ ಶಾಂತಿಸಾಗರ್ ಮರೇಗೌಡ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ಕರವೇ ಜಿಲ್ಲಾಧ್ಯಕ್ಷ ಚಂಬೆರಾಜೇಶ್ ಉಪಸ್ಥಿತರಿದ್ದರು.

Related