ಪಾರ್ಟಿಮುಗಿಸಿ ಮಸಣ ಸೇರಿದ 7 ನತದೃಷ್ಟರು

ಪಾರ್ಟಿಮುಗಿಸಿ ಮಸಣ ಸೇರಿದ 7 ನತದೃಷ್ಟರು

ಬೆಂಗಳೂರು : ನಗರದ ಕೋರಮಂಗಲದಲ್ಲಿ ಸೋಮವಾರ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ 7 ಮಂದಿ ಮೃತಪಟ್ಟಿದ್ದಾರೆ. ಮೃತರದಲ್ಲಿ ಮೂವರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. ಎಲ್ಲರೂ 20ರಿಂದ 30 ವರ್ಷದೊಳಗಿನವರಾಗಿದ್ದಾರೆ.

ಅತಿ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದೇ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಮಧ್ಯರಾತ್ರಿ ಆಡಿ ಕ್ಯೂ 3 ಕಾರು ಫುಟ್ ಪಾತ್ ಮೇಲಿದ್ದ ಬೀದಿ ದೀಪ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಸ್ಥಳದಲ್ಲಿಯೇ ಆರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕರುಣಾಸಾಗರ, ಬಿಂದು, ಇಶಿತಾ, ಡಾ. ಧನುಶಾ, ಅಕ್ಷಯ್ ಗೋಯಲ್, ಉತ್ಸವ್, ರೋಹಿತ್ ಎಂದು ಗುರುತಿಸಲಾಗಿದೆ. ನಗರದ ಸೈಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮೃತರಿಗೆ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಡಿಎಂಕೆ ಶಾಸಕನ ಪುತ್ರ: ಮೃತಪಟ್ಟವರಲ್ಲಿ ಪ್ರಮುಖರಾದವರು ಕರುಣಾಸಾಗರ್ ಹೊಸೂರಿನ ಡಿಎಂಕೆ ಶಾಸಕ ವೈ.ಪ್ರಕಾಶ್ ಪುತ್ರ ಮತ್ತು ಅವರು ಮದುವೆಯಾಗಬೇಕಿದ್ದ ಯುವತಿ ಬಿಂದು. ನಿನ್ನೆ ಸಾಯಂಕಾಲ ಬೆಂಗಳೂರಿಗೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಖರೀದಿಸಲು ಕರುಣಾಸಾಗರ್ ತಮ್ಮ ಆಡಿ ಕಾರಿನಲ್ಲಿ ಬಂದಿದ್ದರು. ಬೆಂಗಳೂರು-ತಮಿಳು ನಾಡು ಮಧ್ಯೆ ಬ್ಯುಸಿನೆಸ್ ಸಂಬಂಧ ಆಗಾಗ ಬಂದು ಹೋಗುತ್ತಿದ್ದರು. ಬೆಂಗಳೂರಿಗೆ ಬರುವಾಗ ತಮ್ಮ ಭಾವಿ ಪತ್ನಿ ಬಿಂದು ಮತ್ತು ಸ್ನೇಹಿತರನ್ನು ಕರೆದುಕೊಂಡು ಬಂದಿದ್ದರು. ಹಿಂತಿರುಗಿ ಚೆನ್ನೈಗೆ ಹೋಗುವಾಗ ಮಧ್ಯರಾತ್ರಿಯಾಗಿತ್ತು. ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.
ಅಪಘಾತದ ತೀವ್ರತೆಗೆ ಆಡಿ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಂತರ ಗೋಡೆಗೆ ಢಿಕ್ಕಿ ಹೊಡೆದು ನಿಂತಿದೆ. ಒಳಗಿದ್ದವರ ಕೈ ಕಾಲು ಮುರಿದು ಹೋಗಿತ್ತು. ಕಾರು ನುಜ್ಜುಗುಜ್ಜಾಗಿ ಚಕ್ರ ದೂರ ಹೋಗಿ ಬಿದ್ದಿತ್ತು. ಅಪಘಾತದ ಶಬ್ದ ತೀವ್ರವಾಗಿ ಕೇಳಿಬಂದು ಪಕ್ಕದಲ್ಲಿದ್ದ ನಿವಾಸಿಗಳಿಗೆ ಮಧ್ಯರಾತ್ರಿ ಎಚ್ಚರವಾಗಿ ಬಂದು ನೋಡುವಾಗ ನಿಜಕ್ಕೂ ದೃಶ್ಯ ಭೀಕರವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ಸೂಕ್ತ ಮಾಹಿತಿ ನೀಡುವುದಾಗಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

Related