ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ 132 ನೇ ಜನ್ಮದಿನಾಚರಣೆ

ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ 132 ನೇ ಜನ್ಮದಿನಾಚರಣೆ

ಬೆಂಗಳೂರು: ಇಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಇವರಿಂದ ಜರುಗಿದ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ 132 ನೇ ಜನ್ಮದಿನಾಚರಣೆ ಹಾಗೂ ಸಂವಿಧಾನ ದಿನಾಚರಣೆಯಲ್ಲಿ ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಪಾಲ್ಗೊಂಡರು.

ವ್ಯವಸ್ಥಿತ ಕಾನೂನುಗಳ ಮೂಲಕ ದೇಶದ ಜನರಿಗೆ ಬದುಕುವ ಅವಕಾಶ ಕಲ್ಪಿಸಿದ ಬಾಬಾ ಸಾಹೇಬರು ಭಾರತವು ಎಂದೂ ಮರೆಯದಂತಹ ವ್ಯಕ್ತಿತ್ವವಾಗಿದ್ದಾರೆ. ವಿಶ್ವದಲ್ಲೇ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಓದಿದ ಬಾಬಾ ಸಾಹೇಬರು ಯಾವುದೋ ಒಂದು ವರ್ಗಕ್ಕೆ ಮಾತ್ರವಲ್ಲದೇ ದೇಶದ ಎಲ್ಲ ಜನರಿಗೂ ಅಗತ್ಯವಿರುವ ಸಂವಿಧಾನವನ್ನು ನೀಡಿದ್ದಾರೆ.

ನೆಲ್ಸನ್ ಮಂಡೇಲಾರಂತವರೂ ಸಹ ಭಾರತಕ್ಕೆ ಬಂದು ತೆರಳುವ ವೇಳೆಗೆ ” ಭಾರತದಿಂದ ನೀವು ಏನನ್ನು ತೆಗೆದುಕೊಂಡು ಹೋಗುತ್ತೀರಾ?” ಎಂದಾಗ ಈ ದೇಶದ ಸಂವಿಧಾನ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಸಂವಿಧಾನವು ಈ ಜಗತ್ತನ್ನು ಪ್ರಭಾವಿಸಿದೆ ಎಂದು ಸಚಿವರು ಹೇಳಿದರು.

ಬಾಬಾ ಸಾಹೇಬರನ್ನು ಮೀಸಲಾತಿ ಕೊಟ್ಟ ಕಾರಣಕ್ಕೆ ನಾವು ಇಂದು ನನೆಯುತ್ತಿಲ್ಲ, ಬದಲಿಗೆ ಅವರು ತನ್ನ ದೇಶದ ಬಗ್ಗೆ ಅಪಾರ ಅಭಿಮಾನವನ್ನು ಹೊಂದಿ ಇಲ್ಲಿನ ಎಲ್ಲಾ ಜನರಿಗೆ ಸಮಾನ ಹಾಗೂ ಸುರಕ್ಷಿತವಾದ ಬದುಕಿನ ವಾತಾವರಣವನ್ನು ನಿರ್ಮಿಸಲು ಬೇಕಾದ ಪರಿಸರವನ್ನು ನಿರ್ಮಿಸಿದ ಕಾರಣಕ್ಕೆ ಅವರನ್ನು ನೆನೆಯಲಾಗುತ್ತದೆ.

ಮಹಾನ್ ಅರ್ಥಶಾಸ್ತ್ರಜ್ಞರಾಗಿದ್ದ ಬಾಬಾ ಸಾಹೇಬರನ್ನು ಅಮರ್ಥ್ಯ ಸೇನ್ ಅಂತವರು ನನ್ನ ಗುರು ಎಂದು ಹೇಳುತ್ತಾರೆ. ಬಾಬಾ ಸಾಹೇಬರ ರೂಪಾಯಿಗೆ ಸಂಬಂಧಿಸಿದ ಅಧ್ಯಯನವೇ ಮುಂದೆ 1935 ರ ಏಪ್ರಿಲ್ 1 ರಂದು ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣವಾಯಿತು.

ಆದರೆ ಅಂತಹ ಐತಿಹಾಸಿಕ ದಿನವನ್ನು ನಾವು ಮೂರ್ಖರ ದಿನ ಎಂದು ಕರೆಯುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ.

ತಳ ವರ್ಗಗಳ ಮಾತ್ರವಲ್ಲದೇ ಎಲ್ಲರೂ ಜ್ಞಾನ ಮಾರ್ಗದ ಮೂಲಕ‌ ಸಾಮಾಜಿಕ ಸಮಸ್ಯೆಗಳಿಗೆ ದನಿಯಾಗಬೇಕು ಆಗ ಮಾತ್ರ ಸಂವಿಧಾನದ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳುತ್ತದೆ.

ಸಂವಿಧಾನಕ್ಕೆ ಸವಾಲು ಇರುವುದನ್ನು ಮನಗಂಡು ನಮ್ಮ ಸರ್ಕಾರವು ಸಂವಿಧಾನದ ಪೀಠಿಕೆ ಓದನ್ನು ಕಡ್ಡಾಯಗೊಳಿಸಿದ್ದು ಈ ಕಾರ್ಯವನ್ನು ಇನ್ನೂ ಹೆಚ್ಚು ಹೆಚ್ಚು ಮಾಡುತ್ತೇವೆ ಎಂದು ಸಚಿವರು ಈ ವೇಳೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಐಎಎಸ್ ಅಧಿಕಾರಿಗಳು, ಪೂಜ್ಯ ಬಂತೇಜಿ ಅವರು ಉಪಸ್ಥಿತರಿದ್ದರು

Related